ಪೆರ್ಲ: ಎಣ್ಮಕಜೆ ಪಂಚಾಯತಿನ 16ನೇ ವಾರ್ಡಿನ ಬೆದ್ರಂಪಳ್ಳ ಬನ-ಬಲ್ತಕಲ್ಲು-ಪಾಟ್ಲದಳ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಫೆಯಾಗಿದ್ದು, ಕಾಮಗಾರಿಯಲ್ಲಿ ಗುತ್ತಿಗೆದಾರ ಭ್ರಷ್ಟಾಚಾರ ಎಸಗಿರುವುದಾಗಿ ಆರೋಪಿಸಿ ನಾಗರಿಕರು ಕಾಮಗಾರಿಗೆ ತಡೆಯೊಡ್ಡಿದರು. ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ 2023-24 ಅವರ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಸುಮಾರು 70 ಲಕ್ಷ ರೂ ಯೋಜನೆಗೆ ಮೀಸಲಿರಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಪೆರ್ಲದ ವ್ಯಕ್ತಿಯೊಬ್ಬರ ಮಾಲಕತ್ವದ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು.
ಪ್ರಸಕ್ತ ಕಳಪೆ ಡಾಂಬರು, ಜಲ್ಲಿಕಲ್ಲು ಉಪಯೋಗಿಸಿ ಯೋಜನೆಯಲ್ಲಿ ಸೂಚಿಸಿದ ರೀತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸದಿರುವುದರ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್, ಬ್ಲೋಕ್ ಎಕ್ಸಿಕ್ಯೂಟಿವ್ ಇಂಜಿನಿಯರ್‍ಗೆ ದೂರು ನೀಡಿದ್ದು ಅವರು ಸೋಮವಾರ ಸಂಜೆ ಸ್ಥಳ ಸಂದರ್ಶಿಸಿ ಪರಿಶೀಲನೆಗೈದು ಗುತ್ತಿಗೆದಾರನ ವಿರುದ್ಧ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈ ಪ್ರದೇಶದ ಬಹೂಪಯೋಗಿ ರಸ್ತೆ ಇದಾಗಿದ್ದು ಈ ಹಿಂದೆ ಡಾಂಬರು ಎದ್ದು ಹೋಗಿ ಹೊಂಡ ಗುಂಡಿಗಳಾಗಿದ್ದ ರಸ್ತೆಗೆ ವಾರ್ಡ್ ಸದಸ್ಯರಾದ ರಾಧಾಕೃಷ್ಣ ನಾಯಕ್ ಶೇಣಿ ಅವರು ಮುತುವರ್ಜಿವಹಿಸಿ ಶಾಸಕರ ಮೂಲಕ ಯೋಜನೆಗೆ ಮೊತ್ತ ಮಂಜೂರುಗೊಳಿಸಿದ್ದು, 2025 ಜೂನ್ ಜೂನ್ 23ರಂದು ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಲಾಗಿತ್ತು.



