ಕಾಸರಗೋಡು: ಚುನಾವಣಾ ಫಲಿತಾಂಶ ಹೊರಬಂದ ನಂತರ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಬಿಜೆಪಿ ಕಾರ್ಯಕರ್ತರ ಮಧ್ಯೆ ಗೊಂದಲ ಮೂಡಿಸಲು ಮತ್ತು ಅವರನ್ನು ಪ್ರಚೋದಿಸಿ ನಾಡಿನ ಸಾಮುದಾಯಿಕ ಸೌಹಾರ್ದತೆ ಹಾಳುಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ. ಎಲ್. ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಹೊಂದಿದ್ದ ಕರ್ನಾಟಕದ ಶಾಸಕರ ನೇತೃತ್ವದಲ್ಲಿ ಈ ಬಾರಿ ಅತ್ಯುತ್ತಮ ಹಾಗೂ ಅಚ್ಚುಕಟ್ಟಾಗಿ ಚುನಾವಣಾ ಚಟುವಟಿಕೆಗಳು ನಡೆದುಬಂದಿದೆ. ಮಂಜೇಶ್ವರದಲ್ಲಿ ಬಿಜೆಪಿ ಇತಿಹಾಸದಲ್ಲೇ ಅತಿ ಹೆಚ್ಚಿನ ಮತಗಳನ್ನು ಈ ಬಾರಿ ಗಳಿಸಿದೆ. ಕಾಸರಗೋಡು ಕ್ಷೇತ್ರದಲ್ಲೂ ಬಿಜೆಪಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಕೇರಳದಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದ ಕ್ಷೇತ್ರಗಳ ಪಟ್ಟಿಯಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ಸೇರ್ಪಡೆಗೊಂಡಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಮೂಲಕ ಕಾರ್ಯಕರ್ತರಲ್ಲಿ ಹತಾಶೆ ಭಾವನೆ ಮೂಡಿಸಲು ನಡೆಸುತ್ತಿರುವ ತಂತ್ರ ಫಲನೀಡದು.
ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಫ್ಲೆಕ್ಸನ್ನು ಸ್ಫೋಟಕ ವಸ್ತುಗಳನ್ನು ಬಳಸಿ ನಾಶಪಡಿಸಿ, ಇದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ, ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಮತ್ತು ಪೆÇಲೀಸರು ಜಾಗರೂಕರಾಗಿರಬೇಕು. ಕಾಸರಗೋಡು ಬಿಜೆಪಿಗೆ ಸಂಬಂಧಿಸಿದಂತೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಹಿನ್ನೆಲೆಯಲ್ಲಿ, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಂ.ಎಲ್ ಅಶ್ವಿನಿ ತಿಳಿಸಿದ್ದಾರೆ.



