HEALTH TIPS

ಜಾತಿಗಣತಿ ವಿಳಂಬ: ಕೇಂದ್ರ ಸರಕಾರದ ವಿರುದ್ಧ ಜೈರಾಮ್‌ ರಮೇಶ್‌ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್ ಪಕ್ಷವು ಪ್ರಸ್ತಾವಿತ ಜಾತಿಗಣತಿಗೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ತನ್ನ ದಾಳಿಯನ್ನು ಗುರುವಾರ ತೀವ್ರಗೊಳಿಸಿದೆ. ಜಾತಿಗಣತಿಗೆ ಯಾವುದೇ ಮಾರ್ಗಸೂಚಿಯನ್ನು ಒದಗಿಸುವಲ್ಲಿ ಸರಕಾರವು ವಿಫಲಗೊಂಡಿದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಅದರ ಅನುಷ್ಠಾನವನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ಮುಂಬರುವ ಜನಗಣತಿಯಲ್ಲಿ ಜಾತಿಗಣತಿಯನ್ನೂ ಸೇರಿಸಲಾಗುವುದು ಎಂದು ಸರಕಾರವು ಪ್ರಕಟಿಸಿ ಒಂದು ವರ್ಷವೇ ಕಳೆದಿದೆ. ಆದರೂ ಯಾವುದೇ ನಿರ್ದಿಷ್ಟ ವಿವರಗಳನ್ನು ಒದಗಿಸಲಾಗಿಲ್ಲ. ಜಾತಿಗಣತಿಯನ್ನು ಹೇಗೆ ನಡೆಸಲಾಗುತ್ತದೆ ಎಂಬ ವಿವರಗಳಿಗಾಗಿ ಇನ್ನೂ ಕಾಯಲಾಗುತ್ತಿದೆ. ಪ್ರತಿಪಕ್ಷಗಳು, ರಾಜ್ಯ ಸರಕಾರಗಳು ಅಥವಾ ತಜ್ಞರೊಂದಿಗೂ ಯಾವುದೇ ಮಾತುಕತೆ ನಡೆಸಲಾಗಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಪ್ರಧಾನಿಯವರ 'ನಾಟಕೀಯ ಯೂ-ಟರ್ನ್'ನ್ನು ಎತ್ತಿ ತೋರಿಸಿರುವ ಅವರು, ಜಾತಿ ಗಣತಿಯನ್ನು ನಡೆಸಲು ತಾನು ನೀತಿ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಸರಕಾರವು ಜು.21,2021ರಂದು ಸಂಸತ್ತಿಗೆ ತಿಳಿಸಿತ್ತು. ನ್ಯಾಯಾಲಯವು ಆದೇಶಿಸಿರುವ ಜಾತಿ ಎಣಿಕೆಯು ಸರಕಾರದ ನೀತಿಯಲ್ಲಿ ಹಸ್ತಕ್ಷೇಪವಾಗುತ್ತದೆ ಎಂದು ಪ್ರತಿಪಾದಿಸಿ ಸೆ.21, 2021ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಅಫಿಡವಿಟ್‌ನಲ್ಲಿಯೂ ಇದೇ ನಿಲುವನ್ನು ಪುನರುಚ್ಚರಿಸಲಾಗಿತ್ತು ಎಂದು ಹೇಳಿದ್ದಾರೆ.

ಜನಗಣತಿಯಲ್ಲಿ ಜಾತಿ ದತ್ತಾಂಶಗಳನ್ನು ಸೇರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಎ.16, 2023ರಂದು ಬರೆದಿದ್ದ ಪತ್ರ ಹಾಗೂ ಎ.28, 2024ರಂದು ದೂರದರ್ಶನ ಸಂದರ್ಶನದಲ್ಲಿ ಪ್ರಧಾನಿ ಈ ಬೇಡಿಕೆಯು 'ನಗರ ನಕ್ಸಲ್' ಚಿಂತನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಟೀಕಿಸಿ ನೀಡಿದ್ದ ಹೇಳಿಕೆ ಸೇರಿದಂತೆ ಈ ಎಲ್ಲ ವರ್ಷಗಳಲ್ಲಿ ನಡೆದಿದ್ದ ರಾಜಕೀಯ ವಿನಿಮಯಗಳನ್ನೂ ರಮೇಶ್‌ ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ಆರೋಪಕ್ಕಾಗಿ ಪ್ರಧಾನಿ ಕಾಂಗ್ರೆಸ್ ನಾಯಕತ್ವದ ಕ್ಷಮೆ ಯಾಚಿಸಲೇಬೇಕು. ಇದಕ್ಕಿಂತ ಮುಖ್ಯವಾಗಿ ತನ್ನ ಯೂ-ಟರ್ನ್‌ಗೆ ವಿವರಣೆಯನ್ನು ಅವರು ಭಾರತದ ಜನರಿಗೆ ನೀಡಬೇಕಿದೆ ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಜಾತಿಗಣತಿ ಕುರಿತು ಮಾತುಕತೆಯನ್ನು ಕೋರಿ ಖರ್ಗೆಯವರು ಮೇ 5, 2025ರಂದು ಬರೆದಿದ್ದ ಪತ್ರಕ್ಕೆ ಸರಕಾರವು ಪ್ರತಿಕ್ರಿಯಿಸಿರಲಿಲ್ಲ. ಅವರು ಅಂದು ಎತ್ತಿದ್ದ ಕಳವಳಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿರುವ ರಮೇಶ್‌, ಜಾತಿ ಗಣತಿಯ ಮಹತ್ವದ ಹೊರತಾಗಿಯೂ ಸರಕಾರವು ಅದನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಖರ್ಗೆ ಅವರ ಪತ್ರವನ್ನು ಉಲ್ಲೇಖಿಸಿ ಜೈರಾಮ್‌ ರಮೇಶ್‌, ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಖಚಿತಪಡಿಸಲು ಜಾತಿಗಣತಿ ಅತ್ಯಗತ್ಯ ಎಂಬ ಕಾಂಗ್ರೆಸ್ ನಿಲುವನ್ನು ಪುನರುಚ್ಚರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries