ಇಂಫಾಲ್: ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-202 ತಡೆದಿದ್ದ ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಹಲವು ಸುತ್ತಿನ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.
ನಾಗಾ ಗುಂಪುಗಳು, 14 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವುದನ್ನು ವಿರೋಧಿಸಿ ಶಾಂಗ್‌ಕೈ ಗ್ರಾಮದ ಜನರು ಸ್ಥಳೀಯ ಪ್ರದೇಶವನ್ನು ಬಂದ್ ಮಾಡಿದ್ದರು.
ಇಂಫಾಲ್‌ನಿಂದ ಉಖ್ರುಲ್ ಜಿಲ್ಲಾ ಕೇಂದ್ರಕ್ಕೆ ಹೋಗುವ ಹೆದ್ದಾರಿಯನ್ನು ತಡೆದಿದ್ದರು.
ಘಟನೆಯಲ್ಲಿ 5 ಮಹಿಳೆಯರಿಗೆ ಸಣ್ಣ ಗಾಯಗಳಾಗಿವೆ. ಅವರಿಗೆ ಭದ್ರತಾ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿವೆ ಎಂದು ಅಧಿಕಾರಿಗಳು ತಿಳಿಸಿದರು.
ಕುಕಿ ಬುಡಕಟ್ಟು ಸಮುದಾಯದ ಪರಮೋಚ್ಛ ಸಂಘಟನೆ 'ಕುಕಿ ಇನ್ಪಿ ಮಣಿಪುರ', 14 ಮಂದಿಯ ಅಪಹರಣವನ್ನು ವಿರೋಧಿಸಿ, ಕುಕಿ ಸಮುದಾಯದ ಜನರು ವಾಸಿಸುವ ಎಲ್ಲಾ ಪ್ರದೇಶಗಳಲ್ಲಿ ಅನಿರ್ದಿಷ್ಟಾವಧಿಯ ಬಂದ್ ಘೋಷಿಸಿತ್ತು.
ಕಾಂಗ್‌ಪೋಕ್ಪಿ ಮತ್ತು ಸೇನಾಪತಿ ಜಿಲ್ಲೆಗಳಲ್ಲಿ ಸಶಸ್ತ್ರ ಬಂಡುಕೋರರ ಗುಂಪುಗಳು ಒತ್ತೆಯಾಳಾಗಿರಿಸಿಕೊಂಡಿದ್ದ, ಕುಕಿ ಮತ್ತು ನಾಗಾ ಸಮುದಾಯಗಳಿಗೆ ಸೇರಿದ 38ಕ್ಕೂ ಅಧಿಕ ಮಂದಿಯ ಪೈಕಿ 31 ಮಂದಿಯನ್ನು ಬಿಡುಗಡೆ ಮಾಡಿವೆ.
ನಮ್ಮ ಸಮುದಾಯದ 14 ಮಂದಿಯನ್ನು ಈ ಗುಂಪುಗಳು ಒತ್ತೆಯಾಳಾಗಿ ಇರಿಸಿಕೊಂಡಿವೆ ಎಂದು 'ಕುಕಿ ಇನ್ಪಿ ಮಣಿಪುರ' ಹೇಳಿದೆ.

