ನವದೆಹಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (ಎನ್‌ಟಿಎ) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಇಂತಹ ಗಂಭೀರ ಲೋಪಗಳಿಗೆ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆ ಅತ್ಯಗತ್ಯ ಎಂದು ಪ್ರತಿಪಾದಿಸಿದೆ.
ಲೋಪದೋಷ ಮುಕ್ತವಾಗಿ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲು ಅನುಕೂಲವಾಗುವಂತೆ ಎನ್‌ಟಿಎ ಸಂಸ್ಥೆಯನ್ನು ಪುನರ್‌ರಚಿಸಬೇಕು ಅಥವಾ ಅದರ ಬದಲಿಗೆ ಸ್ವಾಯತ್ತ ಸಂಸ್ಥೆಯನ್ನು ನೇಮಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠ ನಡೆಸಿತು.
ವಿಚಾರಣೆ ವೇಳೆ ಪರೀಕ್ಷಾ ಅಕ್ರಮಗಳ ಕುರಿತು ಪ್ರಸ್ತಾಪಿಸಿದ ನ್ಯಾಯಪೀಠ, ಇಂತಹ ಘಟನೆಗಳು ಸಂಭವಿಸಿದಾಗ ಅದು ಕೇವಲ ವಿದ್ಯಾರ್ಥಿಗಳ ಮೇಲಷ್ಟೇ ಅಲ್ಲ, ಅವರ ಇಡೀ ಕುಟುಂಬದ ಮೇಲೆಯೂ ತೀವ್ರ ಮಾನಸಿಕ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಪರೀಕ್ಷೆಗಾಗಿ ಮಾನಸಿಕವಾಗಿಯೂ ಒತ್ತಡದಲ್ಲಿರುತ್ತಾರೆ. ಜತೆಗೆ ಸಮಯವನ್ನು ಮೀಸಲಿಟ್ಟಿರುತ್ತಾರೆ. ನಾವು ಯಾವುದೇ ಕಾರಣಕ್ಕೂ ದೇಶದ ಯುವ ಸಮೂಹವನ್ನು ನಿರಾಶೆಗೊಳಿಸಬಾರದು ಎಂದು ಕಳವಳ ವ್ಯಕ್ತಪಡಿಸಿತು.
ಇದೇ ವೇಳೆ ಯುಪಿಎಸ್‌ಸಿ ಪರೀಕ್ಷೆಗಳ ಪಾರದರ್ಶಕತೆಯನ್ನು ಉಲ್ಲೇಖಿಸಿದ ನ್ಯಾಯಾಲಯ, ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಎಂದಿಗೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಎನ್‌ಟಿಎ ಸಂಸ್ಥೆಯು ಅವರನ್ನು ನೋಡಿ ಕಲಿಯಬೇಕಾದ ಅಗತ್ಯವಿದೆ. ನಿಜವಾದ ಹೊಣೆಗಾರಿಕೆಯನ್ನು ನಿಗದಿಪಡಿಸದ ಹೊರತು ಈ ಮೂಲಭೂತ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಮೇ 3 ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವ್ಯಾಪಕ ಆರೋಪಗಳ ಹಿನ್ನೆಲೆಯಲ್ಲಿ, ಮೇ 12 ರಂದು ಎನ್‌ಟಿಎ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಪ್ರಸ್ತುತ ಈ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಜೂನ್ 21 ರಂದು ಮರುಪರೀಕ್ಷೆ ನಿಗದಿಯಾಗಿದೆ.
ಇಡೀ ಪ್ರಕರಣದ ಕುರಿತು ಸಮಗ್ರ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯನ್ನು ಜುಲೈ ಎರಡನೇ ವಾರಕ್ಕೆ ಮುಂದೂಡಿದೆ.

