ತಿರುವನಂತಪುರಂ: ಕೇರಳ ವಿಧಾನ ಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಭರ್ಜರಿ ಜಯ ಭಾರಿಸಿದೆ. 140 ಸದಸ್ಯ ಬಲದ ವಿಧಾನ ಸಭೆಯಲ್ಲಿ ಯುಡಿಎಫ್ 102 ಸ್ಥಾನಗಳನ್ನು ಪಡೆದುಕೊಂಡಿದ್ದು, ಮತ್ತೆ ಅಧಿಕಾರಕ್ಕೆ ಮರಳಲಿದೆ.
ಇನ್ನೊಂದೆಡೆ ಆಡಳಿತಾರೂಢ ಎಲ್‌ಡಿಎಫ್ ಭಾರೀ ಸೋಲಿನ ಮುಖಭಂಗಕ್ಕೆ ಒಳಗಾಗಿದೆ.
ಕಾಂಗ್ರೆಸ್ 63 ಸ್ಥಾನಗಳಲ್ಲಿ ಜಯಗಳಿಸಿದೆ. ಸಿಪಿಐ (ಎಂ) 26 ಸ್ಥಾನಗಳಲ್ಲಿ ಹಾಗೂ ಐಯುಎಂಎಲ್ 22 ಸ್ಥಾನಗಳ ಗೆಲುವು ಗಳಿಸಿದೆ. ಸಿಪಿಐ 8 ಸ್ಥಾನಗಳಲ್ಲಿ ಹಾಗೂ ಕೇರಳ ಕಾಂಗ್ರೆಸ್ (ಕೆಇಸಿ) 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ರೆವೆಲ್ಯೂಷನರಿ ಸೋಷಿಯಲ್ ಪಾರ್ಟಿ (ಆರ್‌ಎಸ್‌ಪಿ) 3 ಸ್ಥಾನಗಳಲ್ಲಿ, ಬಿಜೆಪಿ 3 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಆರ್‌ಜೆಡಿ, ರೆವ್ಯೆಲ್ಯೂಷನರಿ ಮಾರ್ಕ್ಸಿಸ್ಟ್ ಪಾರ್ಟಿ ಆಫ್ ಇಂಡಿಯಾ (ಆರ್‌ಎಂಪಿಒಐ), ಕೇರಳ ಕಾಂಗ್ರೆಸ್ (ಜಾಕೂಬ್) ಕೆಇಸಿ-ಜೆ, ಕಮ್ಯೂನಿಸ್ಟ್ ಮಾಕ್ಸಿಸ್ಟ್ ಪಾರ್ಟಿ ಕೇರಳ ಸ್ಟೇಟ್ ಕಮಿಟಿ (ಸಿಎಂಪಿಕೆಎಸ್‌ಸಿ) ತಲಾ 1 ಸ್ಥಾನಗಳನ್ನು ಪಡೆದುಕೊಂಡಿದೆ. ಇದಲ್ಲದೆ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಗೆದ್ದ ಪ್ರಮುಖರು
ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಊಮ್ಮನ್ ಪುದುಪಳ್ಳಿ ಕ್ಷೇತ್ರದಲ್ಲಿ 57,907ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ್ ಹರಿಪಾಡ್ ಕ್ಷೇತ್ರದಿಂದ 23 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಎಲ್‌ಡಿಎಫ್‌ನ ಭದ್ರಕೋಟೆಯಾದ ಪಯ್ಯನ್ನೂರಿನಲ್ಲಿ ಸಿಪಿಐ(ಎಂ)ನ ಉಚ್ಛಾಟಿತ ನಾಯಕ ಪಿ.ವಿ. ಕುಂಞಿಕೃಷ್ಣನ್ 7 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಬೇಪೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಹಮ್ಮದ್ ರಿಯಾಸ್ 7 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ನೇಮಮ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ರಾಜೀವ್ ಚಂದ್ರಶೇಖರ್ 4978 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ಸೋತ ಪ್ರಮುಖರು
ಬಿಜೆಪಿ ಟಿಕೆಟ್‌ನಿಂದ ತ್ರಿಶೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪದ್ಮಜಾ ವೇಣುಗೋಪಾಲ್ ಸತತ ಮೂರನೇ ಬಾರಿ ಸೋಲು ಕಂಡಿದ್ದಾರೆ. ಪಥನಾಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಚಿವ ಕೆ.ಬಿ. ಗಣೇಶ್ ಕುಮಾರ್ 8 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಅರುನ್ಮುಲ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರೋಗ್ಯ ಸಚಿವೆ ವೀಣಾ ಜಾರ್ಜ್ 18 ಸಾವಿರಕ್ಕೂ ಅಧಿಕ ಮತಗಳಿಂದ ಸೋಲು ಕಂಡಿದ್ದಾರೆ. ಎಟ್ಟುಮಾನೂರ್‌ನಲ್ಲಿ ಕಣಕ್ಕಿಳಿದಿದ್ದ ಸಚಿವ ವಿ.ಎನ್. ವಾಸವನ್ ಕೂಡ 19 ಸಾವಿರಕ್ಕೂ ಅಧಿಕ ಮತಗಳಿಂದ ಸೋತಿದ್ದಾರೆ.
ಕೇರಳದ 3 ಕ್ಷೇತ್ರಗಳಲ್ಲಿ ಅರಳಿದ ಕಮಲ
ಕೇರಳದ ನೇಮಮ್, ಕಳಕೂಟ್ಟಂ ಮತ್ತು ಚಾಥನೂರು ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿದೆ. ನೇಮಮ್ ಕ್ಷೇತ್ರದಲ್ಲಿ ರಾಜೀವ್ ಚಂದ್ರಶೇಖರ್, ಕಳಕೂಟ್ಟಂ ಕ್ಷೇತ್ರದಲ್ಲಿ ವಿ.ಮುರಳೀಧರನ್ ಮತ್ತು ಚಾಥನೂರು ಕ್ಷೇತ್ರದಲ್ಲಿ ಬಿ.ಬಿ. ಗೋಪಕುಮಾರ್ ಗೆಲುವು ಗಳಿಸಿದ್ದಾರೆ.
ನೇಮಮ್ ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ವಿ. ಶಿವನ್ ಕುಟ್ಟಿ ವಿರುದ್ಧ ರಾಜೀವ್ ಚಂದ್ರಶೇಖರ್ 3,800ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳಕೂಟ್ಟಂ ಕ್ಷೇತ್ರದಲ್ಲಿ ಕಡಕಂಪಳ್ಳಿ ಸುರೇಂದ್ರನ್ ವಿರುದ್ಧ ವಿ. ಮುರಳೀಧರನ್ 428 ಮತಗಳ ಅಂರದಿಂದ ಜಯ ಗಳಿಸಿದ್ದಾರೆ. ಚಾಥನೂರು ಕ್ಷೇತ್ರದಲ್ಲಿ ಗೋಪಕುಮಾರ್ ಅವರು ಆರ್. ರಾಜೇಂದ್ರನ್ ಅವರನ್ನು 46,567 ಮತಗಳ ಅಂತರದಿಂದ ಸೋಲಿಸಿದ್ದಾರೆ.

