ಕೇರಳದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್, "ನನಗೆ ಈ ಕುರಿತು ಯಾವುದೇ ಸುಳಿವಿಲ್ಲ. ನಮ್ಮ ಪಕ್ಷದಲ್ಲಿ ಮೊದಲಿಗೆ ಪಕ್ಷದ ಪ್ರತಿನಿಧಿ, ಅಧ್ಯಕ್ಷರು ಚುನಾಯಿತ ಶಾಸಕರನ್ನು ಸಂಪರ್ಕಿಸುತ್ತಾರೆ. ಬಳಿಕ, ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹೈಕಮಾಂಡ್ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ. ನಮ್ಮ ಪಕ್ಷದಲ್ಲಿ ಪ್ರತಿಭಾವಂತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು, ಇದು ಉತ್ತಮ ಚಿಹ್ನೆಯಾಗಿದೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಸಾಕಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶಶಿ ತರೂರ್, " ಕೇರಳದ ಮತದಾರರು ಬದಲಾವಣೆಗಾಗಿ ನಿರ್ಣಾಯಕವಾಗಿ ಮತ ಚಲಾಯಿಸಿದ್ದಾರೆ. ಆಡಳಿತಾರೂಢ ಪಕ್ಷದ ಕೆಲವು ಸಚಿವರು ಹಾಗೂ ಶಾಸಕರು ವೈಯಕ್ತಿಕವಾಗಿ ಜನಪ್ರಿಯ ವ್ಯಕ್ತಿಗಳಾಗಿರಬಹುದು. ಆದರೆ, ನಾವು ಆಡಳಿತಾರೂಢ ಪಕ್ಷಕ್ಕೆ ಮತ ಚಲಾಯಿಸುವುದರಿಂದ ಕೆಟ್ಟ ಆಡಳಿತ ಮುಂದುವರಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಜನರು ಅವರು ವಿರುದ್ಧ ಮತ ಚಲಾಯಿಸಿದ್ದಾರೆ. ಇದು ಮತದಾರರ ಪ್ರಬುದ್ಧತೆಯ ಚಿಹ್ನೆಯಾಗಿದೆ. ಚುನಾವಣಾ ಫಲಿತಾಂಶ ನಿರೀಕ್ಷೆಗಿಂತ ಉತ್ತಮವಾಗಿರಲಿದ್ದು, ನಾವು ಸಾಕಷ್ಟು ಬಹುಮತದೊಂದಿಗೆ ಸರಕಾರ ರಚಿಸಲಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಇದು ಕೇವಲ ಸರಕಾರ ರಚಿಸುವ ಪ್ರಶ್ನೆಯಲ್ಲ. ಯುಡಿಎಫ್ ನಿರೀಕ್ಷೆಗಿಂತಲೂ ಹೆಚ್ಚು ಮುನ್ನಡೆ ಸಾಧಿಸಿದ್ದು, ಐತಿಹಾಸಿಕ ಮುನ್ನಡೆ ಗಳಿಸಿದೆ. ಯುಡಿಎಫ್ 99 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ದೀರ್ಘಕಾಲದ ಬಳಿಕ ನಮ್ಮ ಪಕ್ಷ ಈ ಮಟ್ಟದ ಪ್ರದರ್ಶನ ನೀಡುತ್ತಿದೆ. ಅಚ್ಚರಿದಾಯಕ ಫಲಿತಾಂಶ ಖಚಿತವಾಗುವುದರತ್ತ ನಮ್ಮ ಪಕ್ಷದ ಕಣ್ಣು ನೆಟ್ಟಿದೆ" ಎಂದು ಶಶಿ ತರೂರ್ ಹೇಳಿದರು.

