ನವದೆಹಲಿ: 'ಜೂನ್ 21ರಂದು ನೀಟ್-ಯುಜಿ ಮರು ಪರೀಕ್ಷೆಯನ್ನು ಯಾವುದೇ ಲೋಪವಿಲ್ಲದೆ ನಡೆಸಲಾಗುವುದು' ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಇದೇ ಮೇ 3ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರದ್ದುಗೊಳಿಸಿತ್ತು.
'ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಯಿತು. 'ಪರೀಕ್ಷಾ ಮಾಫಿಯಾ'ದಿಂದಾಗಿ ಒಬ್ಬ ಅರ್ಹ ವಿದ್ಯಾರ್ಥಿಯೂ ಸೀಟು ಕಳೆದುಕೊಳ್ಳಬಾರದು' ಎಂದು ಅವರು ಹೇಳಿದ್ದಾರೆ.
ಜೂನ್ 21ರಂದು ನಡೆಯಲಿರುವ ಮರು ಪರೀಕ್ಷೆಯು ಶೇ 100ರಷ್ಟು ದೋಷ ಮುಕ್ತವಾಗಿರಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
'ಜಾಗರಣ್ ಭಾರತ್ ಶಿಕ್ಷಣ ಸಮಾವೇಶ 2026' ಉದ್ಘಾಟಿಸಿ ಮಾತನಾಡಿದ ಅವರು, 'ಸುಮಾರು 22 ಲಕ್ಷ ವಿದ್ಯಾರ್ಥಿಗಳು ನಿರಾಸೆಗೊಂಡಿದ್ದಾರೆ. ಸರ್ಕಾರವು ವ್ಯವಸ್ಥೆಯನ್ನು ಸರಿಪಡಿಸಲು ಬದ್ಧವಾಗಿದೆ. ಮಕ್ಕಳ ಯಾತನೆಯನ್ನು ಮನಗಂಡು ಹೊಣೆ ಹೊತ್ತುಕೊಂಡು ಹೇಳುತ್ತಿದ್ದೇನೆ. ನಾವು ಕೆಲವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು' ಎಂದು ಹೇಳಿದ್ದಾರೆ.
'ಈ ಬಗ್ಗೆ ಎದ್ದಿರುವ ಟೀಕೆ ಹಾಗೂ ಸವಾಲುಗಳನ್ನು ಎದುರಿಸಲು ಸರ್ಕಾರವು ಸಿದ್ಧವಾಗಿದೆ. ವ್ಯವಸ್ಥೆಯನ್ನು ಸರಿಪಡಿಸುವುದು ನನ್ನ ಜವಾಬ್ದಾರಿ. ಕಣ್ಣು ಮುಚ್ಚಿಕೊಂಡು ದೂರು ಸರಿಯುವುದು ನನ್ನ ಕರ್ತವ್ಯವಲ್ಲ' ಎಂದು ಹೇಳಿದ್ದಾರೆ.

