ಚಂಡೀಗಢ (PTI): ಪಾಕಿಸ್ತಾನದ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಫಿರೋಜ್‌ಪುರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಕೇಂದ್ರದ ಮೇಲೆ ದಾಳಿ ನಡೆಸಿದ ಪಂಜಾಬ್ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಅಧಿಕಾರಿಗಳು ಸ್ಥಳದಿಂದ 4-ಜಿ ಸಂಪರ್ಕ ಹೊಂದಿದ ಚೀನಾ ನಿರ್ಮಿತ ಸೋಲಾರ್ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿಯನ್ನು ಫಿರೋಜ್‌ಪುರದ ಸುಖ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.
'ಆರೋಪಿ ಹಾಗೂ ಆತನ ಸಹಚರರು ಸೇರಿಕೊಂಡು ಸೋಲಾರ್ ಆಧಾರಿತ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಸೇನೆಯ ಕೇಂದ್ರಗಳು, ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಅಳವಡಿಸುತ್ತಿದ್ದರು. ನಂತರ ಕ್ಯಾಮೆರಾ ಸೆರೆಹಿಡಿದ ನೇರ ದೃಶ್ಯಾವಳಿಗಳನ್ನು ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳಿಗೆ ಕಳುಹಿಸಿಕೊಡುತ್ತಿದ್ದರು' ಎಂದು ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.

