ನವದೆಹಲಿ: ಕಳೆದ ವರ್ಷ ಜುಲೈನಲ್ಲಿ ಸಹಿ ಹಾಕಲಾದ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದದ(ಸಿಇಟಿಎ) ಅಡಿಯಲ್ಲಿ ದ್ವಿಮುಖ ವ್ಯಾಪಾರ ಮತ್ತು ಹೂಡಿಕೆಗಳನ್ನು ಹೆಚ್ಚಿಸುವ ಹಾಗೂ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮಾರ್ಗಗಳ ಕುರಿತು ಭಾರತ ಮತ್ತು ಬ್ರಿಟನ್ ದೇಶಗಳು ಶುಕ್ರವಾರ ಚರ್ಚಿಸಿದವು.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಬ್ರಿಟನ್‌ನ ಉದ್ಯಮ ಮತ್ತು ವ್ಯಾಪಾರ ಕಾರ್ಯದರ್ಶಿ ಪೀಟರ್ ಕೈಲ್ ನಡುವಿನ ವರ್ಚುವಲ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ.
'ಭಾರತ-ಬ್ರಿಟನ್ ದೇಶಗಳು ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದದ(ಸಿಇಟಿಎ) ಅಡಿಯಲ್ಲಿ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ತಮ್ಮ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚ ನಡೆಸಿದ್ದೇವೆ' ಎಂದು ಗೋಯಲ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
2025ರ ಜುಲೈ 24ರಂದು ಭಾರತ ಮತ್ತು ಬ್ರಿಟನ್ ದೇಶಗಳು, ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ (ಸಿಇಟಿಎ) ಸಹಿ ಹಾಕಿದ್ದವು. ಇದರ ಅಡಿಯಲ್ಲಿ ಭಾರತದಿಂದ ರಫ್ತಾಗುವ ಶೇ 99ರಷ್ಟು ಉತ್ಪನ್ನಗಳು ಶೂನ್ಯ ಸುಂಕದೊಂದಿಗೆ ಬ್ರಿಟನ್ ಮಾರುಕಟ್ಟೆ ಪ್ರವೇಶಿಸುತ್ತವೆ. ಇದಕ್ಕೆ ಪ್ರತಿಯಾಗಿ, ಬ್ರಿಟನ್‌ನಿಂದ ಭಾರತಕ್ಕೆ ರಫ್ತಾಗುವ ವಿಸ್ಕಿ ಮತ್ತು ದುಬಾರಿ ಕಾರುಗಳ ಮೇಲಿನ ಸುಂಕ ಕಡಿಮೆಯಾಗುತ್ತದೆ.
2030ರ ವೇಳೆಗೆ ಎರಡು ಆರ್ಥಿಕತೆಗಳ ನಡುವಿನ 56 ಬಿಲಿಯನ್ ಡಾಲರ್ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಸಿಇಟಿಎ ಹೊಂದಿದೆ.

