ಜೈಪುರ: ಭಾರತೀಯ ಸೇನೆಯ ಐತಿಹಾಸಿಕ ಮಿಲಿಟರಿ ಕಾರ್ಯಾಚರಣೆ 'ಆಪರೇಷನ್ ಸಿಂಧೂರ' ನಡೆದು ವರ್ಷ ಕಳೆದಿದ್ದು, ಈ ವರ್ಷಾಚರಣೆಯ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ (ಮೇ.7) ವಿಶೇಷ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದರು.
ಜೈಪುರಕ್ಕೆ ಆಗಮಿಸಿದ ಸಚಿವರನ್ನು ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.
ಉಪಮುಖ್ಯಮಂತ್ರಿಗಳಾದ ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಬೈರ್ವಾ, ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಮತ್ತು ಬಿಜೆಪಿ ಸಂಸದ ಮದನ್ ರಾಥೋರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಳಿಕ ಜೈಪುರ ಮಿಲಿಟರಿ ಠಾಣೆಗೆ ಭೇಟಿ ನೀಡಿದ ರಕ್ಷಣಾ ಸಚಿವರು, ಸಪ್ತ ಶಕ್ತಿ ಕಮಾಂಡ್ ಆಯೋಜಿಸಿದ್ದ ಜಂಟಿ ಕಮಾಂಡರ್‌ಗಳ ಸಮ್ಮೇಳನದಲ್ಲಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ 27 ನಿಮಿಷಗಳ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದರು.
ಸಾಕ್ಷ್ಯಚಿತ್ರ ಬಿಡುಗಡೆಯ ನಂತರ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ರಕ್ಷಣಾ ಸಚಿವಾಲಯ, 'ಈ ಚಿತ್ರವು ಸಶಸ್ತ್ರ ಪಡೆಗಳ ಧೈರ್ಯ, ನಿಖರತೆ ಮತ್ತು ಅಚಲ ಮನೋಭಾವವನ್ನು ಗೌರವಿಸುತ್ತದೆ. ಅಲ್ಲದೆ ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ಭಾರತದ ದೃಢ ಸಂಕಲ್ಪವನ್ನು ಇದು ಪ್ರತಿಬಿಂಬಿಸುತ್ತದೆ' ಎಂದು ತಿಳಿಸಿದೆ.
ಭಾರತದ ವಿವಿಧ ಪ್ರದೇಶಗಳಿಂದ ಪಹಲ್ಗಾಮ್‌ಗೆ ಪ್ರವಾಸಕ್ಕೆ ಹೋಗಿದ್ದ 26 ಅಮಾಯಕರು ಕಳೆದ ವರ್ಷ ಏಪ್ರಿಲ್ 22ರಂದು ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಕಾರವಾಗಿ ಮೇ 7ರಂದು ಭಾರತವು 'ಆಪರೇಷನ್ ಸಿಂಧೂರ' ಎಂಬ ಸೇನಾ ಕಾರ್ಯಾಚರಣೆ ಆರಂಭಿಸಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ವಾಯುದಾಳಿ ನಡೆಸುವ ಮೂಲಕ ಕನಿಷ್ಠ 100 ಉಗ್ರರನ್ನು ಸದೆಬಡಿಯಲಾಗಿತ್ತು.
ಬಹವಾಲ್‌ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ, ಲಷ್ಕರ್-ಎ-ತೈಬಾ ನೆಲೆ ಸೇರಿದಂತೆ ಸಿಯಾಲ್ಕೋಟ್‌ನ ಮೆಹ್ಮೂನಾ ಜೋಯಾ, ಮುಜಾಫರಾಬಾದ್‌ನ ಸವಾಯಿ ನಾಲಾ ಮತ್ತು ಸೈಯದ್ ನಾ ಬಿಲಾಲ್, ಕೋಟ್ಲಿಯ ಗುಲ್ಪುರ್ ಮತ್ತು ಅಬ್ಬಾಸ್, ಭಿಂಬರ್‌ನ ಬರ್ನಾಲಾ ಮತ್ತು ಸರ್ಜಾಲ್‌ನಲ್ಲಿರುವ ಉಗ್ರರ ಮೂಲಸೌಕರ್ಯಗಳನ್ನು ಭಾರತೀಯ ವಾಯುಪಡೆ ಧ್ವಂಸಗೊಳಿಸಿತ್ತು.

