ಚೆನ್ನೈ: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆ ಸಂಬಂಧ ರಾಜಕೀಯ ಅನಿಶ್ಚಿತತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಡಿಎಂಕೆ ನಾಯಕಿ ಕನಿಮೊಳಿ ಕರುಣಾನಿಧಿ, 'ನಮಗೆ ರಾಜ್ಯಪಾಲರ ಅಗತ್ಯವೇ ಇಲ್ಲ' ಎಂದು ಹೇಳಿದ್ದಾರೆ. 'ಡಿಎಂಕೆ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ನಮಗೆ ರಾಜ್ಯಪಾಲರ ಅವಶ್ಯಕತೆ ಇಲ್ಲ' ಎಂದು ಅವರು ಪುನರುಚ್ಚರಿಸಿದ್ದಾರೆ.
ಪಿಟಿಐ ವಿಡಿಯೊಗೆ ಪ್ರತಿಕ್ರಿಯಿಸಿದ ಅವರು ರಾಜ್ಯಪಾಲರ ಹುದ್ದೆಯನ್ನು ಅನೂರ್ಜಿತಗೊಳಿಸಬೇಕೆಂಬ ಡಿಎಂಕೆ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರ ರಚಿಸಲು ಬಹುಮತ ಇಲ್ಲ: ಟಿವಿಕೆ ಮುಖ್ಯಸ್ಥ ವಿಜಯ್‌ಗೆ ತಿಳಿಸಿದ ರಾಜ್ಯಪಾಲತಮಿಳುನಾಡು ಸರ್ಕಾರ ರಚನೆಗೆ ಕಸರತ್ತು: ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು?
ಟಿವಿಕೆ ಅತಿ ದೊಡ್ಡ ಪಕ್ಷವಾಗಿರುವ ಹೊರತಾಗಿಯೂ ಹೊಸ ಸರ್ಕಾರ ರಚನೆಗೆ ಬಹುಮತದ ಕೊರತೆಯಿದೆ ಎಂಬ ಕಾರಣ ನೀಡಿ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿರಲಿಲ್ಲ. ಈ ಕುರಿತು ಕೇಳಿದಾಗ, 'ರಾಜ್ಯಪಾಲರ ಕಚೇರಿ ಹಾಗೂ ರಾಜಕೀಯ ಹಿತಾಸಕ್ತಿಗಳ ನಡುವಣ ಆಂತರಿಕ ಸಂರ್ಘಷ ನಡೆಯುತ್ತಿದೆ. ಇದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಸಾಂವಿಧಾನಿಕ ಕಾರ್ಯವಿಧಾನಗಳ ಕುರಿತು ಆತ್ಮಾವಲೋಕನ ಮಾಡಬೇಕಿದೆ' ಎಂದು ಹೇಳಿದ್ದಾರೆ.
'ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟ ಜನಾದೇಶದ ಅಭಾವ ಕಾಡುತ್ತಿದೆ. ಇದು ಈಗಿನ ರಾಜಕೀಯ ಅನಿಶ್ಚಿತತೆಗೆ ಕಾರಣವಾಗಿರಬಹುದು. ಜನರು ಏನು ನಿರ್ಧರಿಸುತ್ತಾರೆಯೇ ಅದುವೇ ಸರ್ವೋಚ್ಚ. ಅದನ್ನು ಗೌರವಿಸಬೇಕು' ಎಂದು ಹೇಳಿದ್ದಾರೆ.
ಡಿಎಂಕೆ-ಎಐಎಡಿಎಂಕೆ ಮೈತ್ರಿ ನಿರಾಕರಿಸಿದ ಕನಿಮೋಳಿ...
ಏತನ್ಮಧ್ಯೆ ನೂತನ ಸರ್ಕಾರ ರಚಿಸಲು ಎಐಎಡಿಎಂಕೆಗೆ ಡಿಎಂಕೆ ಬಾಹ್ಯ ಬೆಂಬಲ ನೀಡಲಿದೆ ಎಂಬ ವರದಿಗಳನ್ನು ಕನಿಮೊಳಿ ತಳ್ಳಿ ಹಾಕಿದರು. 'ಇವೆಲ್ಲವೂ ಬರಿ ವದಂತಿಗಳಷ್ಟೇ. ಎಲ್ಲದಕ್ಕೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

