ತಿರುವನಂತಪುರಂ: ಕೇರಳ ವಿಧಾನಸಭೆಯಲ್ಲಿ ರಾಜ್ಯಪಾಲರ ಉಪಸ್ಥಿತಿಯಲ್ಲಿ ರಾಷ್ಟ್ರಗೀತೆ 'ವಂದೇ ಮಾತರಂ' ಅನ್ನು ಪೂರ್ಣವಾಗಿ ಹಾಡಲಿಲ್ಲ ಎಂದು ಆರೋಪಿಸಿದ ಬಿಜೆಪಿ ಇದು ರಾಜಭವನಕ್ಕೆ ಮಾಡಿದ ಅವಮಾನ ಎಂದು ಹೇಳಿದೆ.
ಕೇರಳ ವಿಧಾನಸಭೆಯಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಭಾಷಣದ ಮೊದಲು ಮತ್ತು ನಂತರ ಬ್ಯಾಂಡ್ ತಂಡವು ವಂದೇ ಮಾತರಂನ ಆರಂಭಿಕ ಚರಣಗಳನ್ನು ಹಾಡಿದೆ.
ಹಿರಿಯ ಬಿಜೆಪಿ ನಾಯಕ, ಶಾಸಕ ವಿ ಮುರಳೀಧರನ್ ಮಾತನಾಡಿ, ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ 'ವಂದೇ ಮಾತರಂ' ಅನ್ನು ಸಂಪೂರ್ಣವಾಗಿ ಹಾಡಬೇಕು ಎಂಬ ಕೇಂದ್ರ ಸರಕಾರದ ನಿರ್ದೇಶನವಿದೆ. ಆದರೆ ಕೇರಳ ವಿಧಾನಸಭೆಯಲ್ಲಿ ಅದನ್ನು ಪಾಲಿಸಲಿಲ್ಲ ಎಂದು ಆರೋಪಿಸಿದರು.
ಇದು ರಾಜಭವನ ಮತ್ತು ಗೌರವಾನ್ವಿತ ರಾಜ್ಯಪಾಲರಿಗೆ ಮಾಡಿದ ಅವಮಾನ. ರಾಷ್ಟ್ರಗೀತೆಗೂ ತೋರಿರುವ ಅಗೌರವವಾಗಿದೆ ಎಂದು ವಿ ಮುರಳೀಧರನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ನಾವು ಈ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತೇವೆ. 1896ರ ಕಾಂಗ್ರೆಸ್ ರಾಷ್ಟ್ರೀಯ ಸಮ್ಮೇಳನದಲ್ಲಿ ಮೊದಲು ಹಾಡಲಾದ ವಂದೇ ಮಾತರಂ ಗೀತೆಯಿಂದ ಕಾಂಗ್ರೆಸ್ ಯಾವಾಗ ದೂರ ಸರಿಯಲು ಪ್ರಾರಂಭಿಸಿತು ಎಂಬುದನ್ನು ಸತೀಶನ್ ಸ್ಪಷ್ಟಪಡಿಸಬೇಕು ಎಂದು ವಿ ಮುರಳೀಧರನ್ ಹೇಳಿದರು.
ಇದಕ್ಕೂ ಮೊದಲು, ವಿಡಿ ಸತೀಶನ್ ಸೇರಿದಂತೆ ಸಂಪುಟ ಸದಸ್ಯರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ 'ವಂದೇ ಮಾತರಂ' ಅನ್ನು ಸಂಪೂರ್ಣವಾಗಿ ಹಾಡಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.

