ನವದೆಹಲಿ: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದ ರಾಜಕಾರಣದಲ್ಲಿ ಸಕ್ರಿಯವಾಗಿರುವ ಸಿದ್ದರಾಮಯ್ಯ ಅವರು ಪ್ರಬಲ ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ರಾಜಕೀಯ ಸೇವೆ ಬಗ್ಗೆ ಎಕ್ಸ್‌ನಲ್ಲಿ ಶ್ಲಾಘಿಸಿರುವ ರಮೇಶ್, 'ಗುಜರಾತ್‌ನಲ್ಲಿ 18 ಬಜೆಟ್‌ಗಳನ್ನು ಮಂಡಿಸಿ ವಜುಭಾಯಿ ವಾಲಾ ಅವರು ದಾಖಲೆ ಬರೆದಿದ್ದರು.
ಅವರಿಗಿಂತ ಒಂದು ಕಡಿಮೆ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ. ಆ ಮೂಲಕ ಪಶ್ಚಿಮ ಬಂಗಾಳದ ಡಾ. ಅಸಿಮ್ ದಾಸ್‌ಗುಪ್ತಾ ಅವರ ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದಾರೆ. ಅವರು ಮಂಡಿಸಿದ 17 ಬಜೆಟ್‌ಗಳೂ ಗಮನಾರ್ಹವಾಗಿದೆ' ಎಂದು ಹೇಳಿದ್ದಾರೆ.
'ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಉಗ್ರ ಪ್ರತಿಪಾದಕರಾಗಿದ್ದಾರೆ. ಜಾತ್ಯತೀತ ಮೌಲ್ಯಗಳ ರಕ್ಷಕರಾಗಿದ್ದಾರೆ. ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವದ ಪ್ರಬಲ ಧ್ವನಿಯಾಗಿದ್ದಾರೆ. ಆ ಮೂಲಕ ಒಬ್ಬ ನೈಜ ಜನನಾಯಕರಾಗಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಅವರು ನೀಡಿದ ಬಹುಮುಖಿ ಕೊಡುಗೆಗಳು ಶಾಶ್ವತವಾಗಿ ಉಳಿಯಲಿವೆ' ಎಂದಿದ್ದಾರೆ.
ರಾಜೀನಾಮೆ ವೇಳೆ ಅವರ ನಡೆಯು ಅವರ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

