ನವದೆಹಲಿ: ದೇಶದ ಮೊದಲ ಬುಲೆಟ್ ರೈಲಿನ ವಿನ್ಯಾಸವನ್ನು ಭಾರತೀಯ ರೈಲ್ವೆಯು
ಅನಾವರಣಗೊಳಿಸಿದ್ದು, ತನ್ನ ಪ್ರಧಾನ ಕಚೇರಿಯಾದ 'ರೈಲ್ ಭವನ'ದ ಗೇಟ್ ಸಂಖ್ಯೆ 4ರಲ್ಲಿ ಸೋಮವಾರ(ಮೇ 18) ಪ್ರದರ್ಶಿಸಿದೆ.
ಬುಲೆಟ್ ರೈಲನ್ನು ಗಂಟೆಗೆ 280 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದ್ದು, 508 ಕಿ.ಮೀ ಉದ್ದದ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್‌ನಲ್ಲಿ(ಎಂಎಹೆಚ್‌ಎಸ್‌ಆರ್) ಸಂಚರಿಸಲಿದೆ.
ಇದರಿಂದ ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಅವಧಿ ಸುಮಾರು 2 ಗಂಟೆ ಕಡಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯು ಮಹಾರಾಷ್ಟ್ರ, ಗುಜರಾತ್ ಹಾಗೂ ದಾದ್ರಾ ಮತ್ತು ನಗರ ಹವೇಲಿಯನ್ನು ಒಳಗೊಂಡಿದೆ. ಮುಂಬೈ, ಠಾಣೆ, ಸೂರತ್, ವಡೋದರಾ ಮತ್ತು ಅಹಮದಾಬಾದ್ ಸೇರಿದಂತೆ ಒಟ್ಟು 12 ನಿಲ್ದಾಣಗಳನ್ನು ಹೊಂದಿರಲಿದೆ. ಗುಜರಾತ್‌ನ ಎಂಟು ನಿಲ್ದಾಣಗಳ ಕೆಲಸ ಪೂರ್ಣಗೊಂಡಿದೆ. ಮಹಾರಾಷ್ಟ್ರದ ನಿಲ್ದಾಣಗಳಲ್ಲಿ ಕೆಲಸ ಪ್ರಗತಿಯಲ್ಲಿದ್ದು, ಇದುವರೆಗೆ ಹದಿನೇಳು ನದಿ ಸೇತುವೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.

