ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಾಲ್‍ಭಾಗ್ ಕುರುಡಪದವು ರಸ್ತೆ ಅಭಿವೃದ್ದಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ತಿಂಗಳು ಮೊಟಕುಗೊಂಡಿದ್ದ ವಾಹನಗಳ ಸಂಚಾರ ಪುನಾರಾರಂ¨Àsಗೊಂಡಿದೆ. ಇದರಿಂದ ಊರವರು ನಿಟ್ಟುಸಿರು ಬಿಟ್ಟಿದ್ದಾರೆ. ಲಾಲ್‍ಭಾಗ್‍ನಿಂದ ಅಮ್ಮೇರಿ ತನಕ ಕೋಟ್ಯಂತರ ರೂ. ವೆಚ್ಚದಲ್ಲಿ ಸುಮಾರು ಮೂರುವರೆ ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ದಿಗೊಳಿಸಲಾಗಿದೆ. ಆದರೆ ಇನ್ನೂ ಹಲವು ಕೆಲಸಗಳು ಬಾಕಿ ಉಳಿದಿರುವುದಾಗಿ ಹೇಳಲಾಗುತ್ತಿದೆ.
ಅಭಿವೃದ್ದಿ ಕೆಲಸದ ಮಧ್ಯೆ ಡಾಮರೀಕರಣ ಹಾಗೂ ಚರಂಡಿ ಕಾಮಗಾರಿ ಕಳಪೆ ಮಟ್ಟದಲ್ಲಿದೆ ಎಂದು ಆರೋಪಿಸಿ ಊರವರು ಪ್ರತಿಭಟನೆ ನಡೆಸಿದ್ದರು. ಈಗ ಈ ಅಭಿವೃದ್ದಿ ಕಾಮಗಾರಿಯಲ್ಲಿ ವ್ಯವಸ್ಥಿತ ಚರಂಡಿ, ಸಂಕ ನಿರ್ಮಿಸಲು ಗುತ್ತಿಗೆದಾರ ನಿರ್ಲಕ್ಷ ತೋರುತ್ತಿರುವುದರಿಂದ ಮಳೆ ನೀರು ತಗ್ಗು ಪ್ರದೇಶಕ್ಕೆ ಹರಿದು ಹಲವಾರು ಕುಟುಂಬಗಳಿಗೆ ಸಮಸ್ಯೆ ಉಂಟಾಗುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ. ಅಲ್ಲದೆ ರಸ್ತೆ ಬದಿಯಲ್ಲಿ ತಡೆ ಬೇಲಿ ನಿರ್ಮಿಸದೆ ಇರುವುದು ಅಪಘಾತಕ್ಕೆ ಕಾರಣವಾಗುತ್ತಿರುವುದಾಗಿ ದೂರಲಾಗಿದೆ. ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಊರವರು ವಿಜಿಲೆನ್ಸ್ ಸಹಿತ ವಿವಿಧ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲು ಸಿದ್ದತೆ ನಡೆಸುತ್ತಿದ್ದಾರೆ.

.jpg)
