ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಮೂಲಕ ಮಂಗಳವಾರ ಮಾತುಕತೆ ನಡೆಸಿದ್ದು, ಭಿನ್ನಾಭಿಪ್ರಾಯ ಏರ್ಪಟ್ಟಿದೆ ಎಂದು ಅಮೆರಿಕದ ಮಾಧ್ಯಮಗಳಲ್ಲಿ ವರದಿಯಾಗಿದೆ.
ಟ್ರಂಪ್ ಜೊತೆಗಿನ ಮಾತುಕತೆ ಬಳಿಕ, ನೆತನ್ಯಾಹು ಅವರಿಗೆ ತಲೆಬಿಸಿಯಾಗಿದೆ ಎಂದು 'Axios' ಸುದ್ದಿಸಂಸ್ಥೆ ವರದಿ ಮಾಡಿದೆ.
ಇರಾನ್‌ನ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿ ನಿರ್ಣಾಯಕ ದಾಳಿ ನಡೆಸುವ ಮೂಲಕ, ಸೇನಾ ಸಾಮರ್ಥ್ಯವನ್ನು ಕುಗ್ಗಿಸಿ, ಅಲ್ಲಿನ ಆಡಳಿತವನ್ನು ದುರ್ಬಲಗೊಳಿಸಬೇಕು ಎಂಬುದು ನೆತನ್ಯಾಹು ಉದ್ದೇಶ. ಆದರೆ, ದಾಳಿಯನ್ನು ಪುನರಾರಂಭಿಸುವ ಬದಲು, ಒಪ್ಪಂದ ಮಾಡಿಕೊಳ್ಳಲು ಟ್ರಂಪ್ ಮುಂದಾಗಿದ್ದಾರೆ. ಇದು, ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಕತಾರ್ ಮತ್ತು ಯುಎಇ ಸೇರಿದಂತೆ ಇತರ ಅರಬ್ ರಾಷ್ಟ್ರಗಳ ಮನವಿಯ ಮೇರೆಗೆ ಇರಾನ್ ಮೇಲೆ ಮಂಗಳವಾರ ನಡೆಸಲು ಉದ್ದೇಶಿಸಿದ್ದ ದಾಳಿಯನ್ನು ಮುಂದೂಡಲು ಯೋಜಿಸಿರುವುದಾಗಿ ಟ್ರಂಪ್ ಭಾನುವಾರ ತಿಳಿಸಿದ್ದರು.
ಇರಾನ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಪದೇ ಪದೇ ಹೇಳುತ್ತಿರುವ ಟ್ರಂಪ್, ಒಪ್ಪಂದ ಸಾಧ್ಯವಾಗದಿದ್ದರೆ ದಾಳಿ ನಡೆಸುವುದಾಗಿ ತಿಳಿಸಿದ್ದಾರೆ.
'ಯುದ್ಧ ಕೊನೆಗೊಳಿಸಲು ಆತುರವಿಲ್ಲ'
'ಇರಾನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸಲು ಯಾವುದೇ ಆತುರವಿಲ್ಲ. ಸಂಘರ್ಷವನ್ನು ಅಂತ್ಯಗೊಳಿಸಲು ಗಡುವು ನಿಗದಿಪಡಿಸುವುದಕ್ಕಿಂತ ಕಾರ್ಯಾಚರಣೆಯ ಉದ್ದೇಶಗಳನ್ನು ಸಾಧಿಸುವುದೇ ಮುಖ್ಯ. ಅವರು ಒಪ್ಪಂದಕ್ಕೆ ಸಹಿ ಹಾಕುವುದು ಅತಿ ಮುಖ್ಯ' ಎಂದು ಟ್ರಂಪ್ ಬುಧವಾರ ಹೇಳಿದ್ದಾರೆ.
'ಇರಾನ್ ಜತೆಗಿನ ಒಪ್ಪಂದವು ಅಂತಿಮ ಹಂತದಲ್ಲಿದೆ' ಎಂದಿದ್ದ ಅವರು, 'ಒಂದು ವೇಳೆ ಇರಾನ್ ಇದಕ್ಕೆ ಒಪ್ಪದಿದ್ದರೆ ಮತ್ತೆ ದಾಳಿ ಮಾಡುವುದಾಗಿ' ಎಚ್ಚರಿಸಿದ್ದಾರೆ.
ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಇರಾನ್ ಮೇಲೆ ಫೆಬ್ರುವರಿ 28ರಂದು ಜಂಟಿ ದಾಳಿ ನಡೆಸಿದ್ದವು. ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಮಾತ್ರವಲ್ಲದೆ, ಅವುಗಳ ಮಿತ್ರರಾಷ್ಟ್ರಗಳ ವಿರುದ್ಧವೂ ಇರಾನ್ ಪ್ರತಿದಾಳಿ ನಡೆಸಿದ್ದರಿಂದ, ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

