ಟೆಹರಾನ್: ಅಮೆರಿಕವು ನಾವು ಶರಣಾಗತಿಯಾಗುತ್ತೇವೆ ಎನ್ನುವ ನಂಬಿಕೆಯಲ್ಲಿದೆ. ನಮ್ಮ ಮೇಲೆ ಮತ್ತೊಮ್ಮೆ ದಾಳಿ ನಡೆಸಲು ಅವರು ಬಯಸುತ್ತಿದ್ದಾರೆ ಎಂದು ಇರಾನ್‌ನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಾಗರ್ ಘಲಿಬಾಫ್ ಅವರು ಬುಧವಾರ(ಮೇ 20) ತಿಳಿಸಿದ್ದಾರೆ.
ಆರ್ಥಿಕ ಮತ್ತು ರಾಜಕೀಯ ಒತ್ತಡದ ಹೊರತಾಗಿಯೂ ಅಮೆರಿಕವು ತನ್ನ ಮಿಲಿಟರಿ ಉದ್ದೇಶಗಳನ್ನು ಕೈಬಿಟ್ಟಿಲ್ಲ ಮತ್ತು ಅವರ ಚಲನವಲನಗಳನ್ನು ಗಮನಿಸಿದರೆ, ಮತ್ತೆ ಯುದ್ಧವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅನುಮಾನವಾಗುತ್ತಿದೆ ಎಂದು ಹೇಳಿದ್ದಾರೆ.
ಯಾವುದೇ ಸಂದರ್ಭದಲ್ಲೂ ಇರಾನ್ ಬೆದರಿಕೆಗಳಿಗೆ ಮಣಿಯುವುದಿಲ್ಲ, ಸಂಭಾವ್ಯ ದಾಳಿಗಳನ್ನು ಎದುರಿಸಲು ನಾವು ಸಿದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.
ಇದು ಇಚ್ಛೆಯ ಯುದ್ಧ ಎನ್ನುವುದು ನಮಗೆ ಸ್ಪಷ್ಟವಾಗಿದೆ. ಈ ಯುದ್ಧದಲ್ಲಿ ಗೆಲ್ಲುವವರು ಇರಾನ್‌ನ ಇತಿಹಾಸ ಬರೆಯಲಿದ್ದಾರೆ ಮತ್ತು ಭವಿಷ್ಯವನ್ನು ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ.
ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ನಾವು ದಾಳಿ ಮಾಡುತ್ತೇವೆ ಎಂದು ಟ್ರಂಪ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಇರಾನ್‌ನ ರೆವಲೂಷನರಿ ಗಾರ್ಡ್ಸ್, ಅಮೆರಿಕ ದಾಳಿ ಮಾಡಿದರೆ ಈ ಸಂಘರ್ಷವು ಪಶ್ಚಿಮ ಏಷ್ಯಾದ ಹೊರಗೂ ವ್ಯಾಪಿಸುತ್ತದೆ ಎಂದು ಎಚ್ಚರಿಸಿದ್ದರು.
'ಇರಾನ್ ಸಂಘರ್ಷವನ್ನು ಕೊನೆಗೊಳಿಸಲು ಯಾವುದೇ ಆತುರ ಇಲ್ಲ. ನಮಗೆ ಕಾರ್ಯಾಚರಣೆಯ ಉದ್ದೇಶಗಳನ್ನು ಸಾಧಿಸುವುದು ಮುಖ್ಯವಾಗಿದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ಇದರಿಂದಾಗಿ ಪಶ್ಚಿಮ ಏಷ್ಯಾ ಸಂಘರ್ಷವು ಮುಂದುವರಿಯುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಫೆ.28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಏ.8ರಿಂದ ಕದನ ವಿರಾಮ ಜಾರಿಯಲ್ಲಿದ್ದರೂ, ಅಲ್ಲಿನ ಪರಿಸ್ಥಿತಿಯು ಬೂದಿ ಮುಚ್ಚಿದ ಕೆಂಡದಂತಿದೆ.

