ನವದೆಹಲಿ: ರಸ್ತೆಗಳ ಮೇಲೆ ನಮಾಜ್ ಮಾಡುವುದು ಹಿಂದೂಗಳನ್ನು ಬೆದರಿಸುವ ಉದ್ದೇಶ ಎಂದು ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಬುಧವಾರ ಆರೋಪಿಸಿದೆ.
ರಸ್ತೆಯ ಮೇಲೆ ನಮಾಜ್ ಮಾಡುವುದು ಧಾರ್ಮಿಕ ಆಚರಣೆಯಲ್ಲ. ಹಿಂದೂ ಸಮಾಜ ಮತ್ತು ಆಡಳಿತವನ್ನು ಬೆದರಿಸುವ ಉದ್ದೇಶದಿಂದ ಮಾಡುವ ಶಕ್ತಿ ಪ್ರದರ್ಶನ ಮಾಡುವ ತಂತ್ರ ಎಂದು ವಿಎಚ್‌ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಸ್ತೆ ಮೇಲೆ ನಮಾಜ್ ಮಾಡುವುದನ್ನು ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ನಮಾಜ್ ಮಾಡುವುದು ಪ್ರಾರ್ಥನೆಯಲ್ಲ ಅಡಚಣೆ. ಇದು ಸಂವಿಧಾನಕ್ಕೆ ಮಾತ್ರವಲ್ಲದೇ ಮಾನವೀಯತೆ ಮತ್ತು ಇಸ್ಲಾಂಗೂ ವಿರುದ್ಧವಾದುದಾಗಿದೆ ಎಂದು ಸುರೇಂದ್ರ ಜೈನ್ ತಿಳಿಸಿದ್ದಾರೆ.
ರಸ್ತೆಯಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಿ ಹಲವು ನ್ಯಾಯಾಲಯಗಳು ಆದೇಶ ನೀಡಿವೆ. ಸುಪ್ರೀಂ ಕೋರ್ಟ್ ಕೂಡ ಈ ಪದ್ಧತಿ ಬಗ್ಗೆ ಅಸಮ್ಮತಿಯನ್ನು ಸೂಚಿಸಿದೆ. ಇದರ ಹೊರತಾಗಿಯೂ ರಸ್ತೆಯಲ್ಲಿ ನಮಾಜ್ ಮಾಡುವುದು ಸಂವಿಧಾನ ಮತ್ತು ನ್ಯಾಯಾಲಯದ ಉಲ್ಲಂಘನೆಯಾಗಿರುತ್ತದೆ ಎಂದು ಹೇಳಿದ್ದಾರೆ.
ರಸ್ತೆಯಲ್ಲಿ ನಮಾಜ್ ಮಾಡುವುದರ ವಿರುದ್ಧ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಕೈಗೊಂಡಿರುವ ಕ್ರಮವನ್ನು ಸ್ವಾಗತಿಸುತ್ತೇವೆ. ದೆಹಲಿಯಲ್ಲಿ ರೈಲು ಹಳಿಯ ಮೇಲೆ ನಮಾಜ್ ಮಾಡುವುದರಿಂದ ಗಂಟೆಗಟ್ಟಲೆ ರೈಲು ಸಂಚಾರದಲ್ಲಿ ವ್ಯತ್ಯಯವಾಗುತ್ತದೆ. ಗುರುಗ್ರಾಮದಲ್ಲಿ ರಸ್ತೆಯಲ್ಲಿ ನಮಾಜ್ ಮಾಡುವುದರಿಂದ 8 ಗಂಟೆ ಸಂಚಾರ ದಟ್ಟಣೆಯಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಜನರನ್ನು ಭಯೋತ್ಪಾದನೆಯ ಇನ್ನೊಂದು ಪಥದತ್ತ ತಳ್ಳುವ ಬದಲು ಕಾನೂನನ್ನು ಪಾಲಿಸುವಂತೆ ಮುಸ್ಲಿಂ ಧರ್ಮಗುರುಗಳು ಪ್ರೋತ್ಸಾಹಿಸಬೇಕು' ಎಂದು ಒತ್ತಾಯಿಸಿದ್ದಾರೆ.

