ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ನಿವಾಸ ಶ್ವೇತಭವನದ ಸಮೀಪ ಗುಂಡಿನ ದಾಳಿ ನಡೆದಿದ್ದು, ಬಂದೂಕುಧಾರಿಯನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಏನಿದು ಘಟನೆ?
ಶನಿವಾರ (ಮೇ 23) ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ಸ್ಥಳೀಯ ಕಾಲಮಾನ, ಶ್ವೇತಭವನ ಸಂಕೀರ್ಣದ ಹೊರಗಿರುವ 17ನೇ ಸ್ಟ್ರೀಟ್ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ಬಳಿಯ ಭದ್ರತಾ ಚೆಕ್‌ಪಾಯಿಂಟ್‌ನಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ ನಡೆದಿದೆ.
ಶೂಟರ್ ಯಾರು?
ಗುಂಡಿನ ದಾಳಿ ನಡೆಸಿದ ಶಂಕಿತ ವ್ಯಕ್ತಿಯನ್ನು ಮೇರಿಲ್ಯಾಂಡ್‌ನ 21 ವರ್ಷದ ನಾಸಿರ್ ಬೆಸ್ಟ್ ಎಂದು ಗುರುತಿಸಲಾಗಿದೆ. ಈತ ಮಾನಸಿಕ ಅಸ್ವಸ್ಥ ಎನ್ನಲಾಗಿದ್ದು, ಈ ಹಿಂದೆಯೂ ವೈಟ್ ಹೌಸ್ ಆವರಣಕ್ಕೆ ನುಗ್ಗಲು ಯತ್ನಿಸಿ ಸಿಕ್ಕಿಬಿದ್ದಿದ್ದ ಎಂದು ವರದಿಯಾಗಿದೆ.
ದಾಳಿ ನಡೆದದ್ದು ಹೇಗೆ?:
ಆರೋಪಿಯು ತನ್ನ ಬ್ಯಾಗ್‌ನಿಂದ ಪಿಸ್ತೂಲ್ ತೆಗೆದು ಅಲ್ಲಿದ್ದ ಭದ್ರತಾ ಅಧಿಕಾರಿಗಳ ಮೇಲೆ ದಿಢೀರ್ ಗುಂಡಿನ ದಾಳಿ ನಡೆಸಿದ್ದಾನೆ. ಸುಮಾರು 20 ರಿಂದ 30 ಸುತ್ತುಗಳ ಫೈರಿಂಗ್ ಶಬ್ದ ಕೇಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗುಂಡಿನ ಚಕಮಕಿ:
ಅಮೆರಿಕದ ಅಧ್ಯಕ್ಷರ ರಕ್ಷಣೆ ಹೊತ್ತುಕೊಂಡಿರುವ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ತಕ್ಷಣವೇ ಪ್ರತಿದಾಳಿ ನಡೆಸಿದ್ದಾರೆ. ನಂತರ ಶೂಟೌಟ್‌ನಲ್ಲಿ ಗಂಭೀರವಾಗಿ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿದ್ದಾನೆ ಎಂದು ದೃಢೀಕರಿಸಲಾಯಿತು. ಸೀಕ್ರೇಟ್ ಸರ್ವಿಸ್‌ನ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ.
ಡೊನಾಲ್ಡ್ ಟ್ರಂಪ್ ಸುರಕ್ಷಿತ:
ಈ ಘಟನೆ ನಡೆಯುವ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲೇ ಇದ್ದರು. ಅವರು ಸುರಕ್ಷಿತರಾಗಿದ್ದು, ದೈನಂದಿನ ಕೆಲಸಗಳಿಗೆ ಯಾವುದೇ ಅಡಚಣೆ ಎದುರಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓರ್ವ ವ್ಯಕ್ತಿಗೆ ಗಾಯ:
ಗುಂಡಿನ ಚಕಮಕಿಯ ನಡುವೆ ಅಲ್ಲೇ ಇದ್ದ ಸಾರ್ವಜನಿಕರೊಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈ ಘಟನೆಯಿಂದ ಸಾರ್ವಜನಿಕರು ಭಯಭೀತಗೊಂಡಿದ್ದಾರೆ. ಈ ಸಮಯದಲ್ಲಿ ವೈಟ್ ಹೌಸ್ ನಾರ್ಟ್ ಲಾನ್‌ನಲ್ಲಿದ್ದ ಪತ್ರಕರ್ತರು ಓಡಿ ಹೋದ ಕಾರಣ ಗುಂಡಿನ ದಾಳಿಯಿಂದ ಪಾರಾಗಿದ್ದಾರೆ. ಎಬಿಸಿ ನ್ಯೂಸ್ ವರದಿಗಾರ್ತಿ ವರದಿ ಮಾಡುತ್ತಿದ್ದಾಗ ಗುಂಡಿನ ಚಕಮಕಿ ನಡೆದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ತನಿಖೆಗೆ ಆದೇಶ:
ಘಟನೆ ಸಂಬಂಧ ಅಮೆರಿಕದ ಸೀಕ್ರೆಟ್ ಸರ್ವಿಸ್ ಸಮಗ್ರ ತನಿಖೆ ನಡೆಸುತ್ತಿದೆ. ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ದಾಳಿಕೋರನ ಉದ್ದೇಶ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಟ್ರಂಪ್ ಹತ್ಯೆಗೆ ವಿಫಲ ಯತ್ನಗಳು:
2026ರ ಏಪ್ರಿಲ್ 25ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ, ಅಮೆರಿಕದ ಪ್ರಥಮ ಮಹಳೆ ಮೆಲಾನಿಯಾ ಟ್ರಂಪ್ ಭಾಗವಹಿಸಿದ್ದ ಶ್ವೇತಭವನದ ಭಾತ್ಮಿದಾರರ ಸಂಘದ ಭೋಜನಕೂಟದಲ್ಲಿ ಗುಂಡಿನ ದಾಳಿ ನಡೆಸಿದ ಶಸ್ತ್ರಸಜ್ಜಿತ ವ್ಯಕ್ತಿಯನ್ನು ಬಂಧಿಸಲಾಗಿತ್ತು.
2024ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನದ ಚುನಾವಣೆ ಸನಿಹದಲ್ಲಿರುವ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಪೆನ್ಸಿಲ್ವೇನಿಯಾದ ಬಟ್ಲರ್ ಎಂಬಲ್ಲಿ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಟ್ರಂಪ್ ಅವರ ಕಿವಿಗೆ ಗಾಯವಾಗಿತ್ತು. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದನು. ಹತ್ಯೆ ಯತ್ನ ನಡೆಸಿದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬ 20 ವರ್ಷದ ಯುವಕನನ್ನು ಸೀಕ್ರೆಟ್ ಸರ್ವಿಸ್‌ನ ಭದ್ರತಾ ಸಿಬ್ಬಂದಿಯು ಸ್ಥಳದಲ್ಲಿಯೇ ಹತ್ಯೆ ಮಾಡಿದ್ದರು.
ಅದಾದ ಬೆನ್ನಲ್ಲೇ ಫ್ಲೋರಿಡಾದಲ್ಲಿ ವೆಸ್ಟ್ ಪಾಮ್ ಬೀಚ್ ಕೋರ್ಸ್‌ನಲ್ಲಿ ಟ್ರಂಪ್ ಗಾಲ್ಫ್ ಆಡುತ್ತಿದ್ದಾಗ ಮತ್ತೊಮ್ಮೆ ಹತ್ಯೆಗೈಯುವ ಯತ್ನ ನಡೆದಿತ್ತು. ಬಂಧಿತ ಆರೋಪಿ ರಾನ್ ವೆಸ್ಲಿ ರೂತ್‌ಗೆ ಜೀವಾವಾಧಿ ಶಿಕ್ಷೆ ವಿಧಿಸಲಾಗಿತ್ತು.

