ವಿಶ್ವಸಂಸ್ಥೆ: ಎಬೋಲಾ ಸೋಂಕು ಹರಡುವಿಕೆಯನ್ನು ಜಾಗತಿಕ ಮಟ್ಟದಲ್ಲಿ ಗಮನ ಹರಿಸಬೇಕಾದ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ (ಪಿಎಚ್‌ಇಐಸಿ) ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಘೋಷಿಸಿದೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಹಾಗೂ ಉಂಗಾಡದಲ್ಲಿ ವರದಿಯಾಗಿರುವ ಎಬೋಲಾ ಕಾಯಿಲೆ ಗಮನದಲ್ಲಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆಯು ಅಂತರರಾಷ್ಟ್ರೀಯ ಆರೋಗ್ಯ ನಿಯಮ (ಐಎಚ್‌ಪಿ) 2005ರ ಅಡಿಯಲ್ಲಿ ಜಾಗತಿಕ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ಈ ಕುರಿತು ಅಧಿಕೃತವಾಗಿ ಘೋಷಿಸಲಾಗಿದೆ ಎಂದು ತಿಳಿಸಿದೆ.
ವಿಶ್ವ ಆರೋ ಸಂಸ್ಥೆಯ ತುರ್ತು ಸಮಿತಿಯು ಎಬೋಲಾ ರೋಗದ ನಿಯಂತ್ರಣಕ್ಕೆ ಶಿಫಾರಸುಗಳನ್ನು ಮಾಡಿದೆ. ವೈರಸ್ ಪತ್ತೆಯಾಗಿರುವ ಪ್ರದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಜ್ವರದ ಲಕ್ಷಣಗಳಿದ್ದರೆ ಅದನ್ನು ಪತ್ತೆ ಹಚ್ಚಲು ಹಾಗೂ ಬೇಕಾದ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಅಲ್ಲದೆ ಅಂತಹ ಪ್ರದೇಶಗಳಿಗೆ ತೆರಳದಂತೆ ಸೂಚಿಸಲಾಗಿದೆ.
ಭಾರತದಲ್ಲಿ ಪತ್ತೆಯಾಗಿಲ್ಲ…
ಭಾರತದಲ್ಲಿ ಎಬೋಲಾ ಪ್ರಕರಣಗಳು ಈವರೆಗೆ ವರದಿಯಾಗಿಲ್ಲ. ಆದರೂ ಜಾಗರೂಕತೆ ವಹಿಸಲಾಗುತ್ತಿದೆ. ಆರೋಗ್ಯ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆ ಸೂಚಿಸಲಾಗಿದೆ.
ಕಾಂಗೋದಲ್ಲಿ 200 ಮಂದಿ ಸಾವು
ಕಾಂಗೋದಲ್ಲಿ ಎಬೋಲಾ ಸೋಂಕಿನಿಂದ ಮೃತರ ಸಂಖ್ಯೆ 20೦ರ ಗಡಿ ದಾಟಿ ದಾಟಿದೆ. ಒಟ್ಟಾರೆ 867 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಆಫ್ರಿಕಾ ಖಂಡದಲ್ಲಿ ಕಳೆದ ಅರ್ಧ ಶತಮಾನದಲ್ಲಿ ಎಬೋಲಾ ಸೋಕಿನಿಂದ 15 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

