ಪುದುಚೆರಿ: 2026ರ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಎಐಎನ್‌ಆರ್‌ಸಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ್ದು, ಎಐಎನ್‌ಆರ್‌ಸಿ ಮುಖ್ಯಸ್ಥ ಎನ್.ರಂಗಸಾಮಿ ಅವರು ಐದನೇ ಬಾರಿಗೆ ಪುದುಚೆರಿಯನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
ನಿನ್ನೆ (ಶುಕ್ರವಾರ) ನಡೆದ ಸಭೆಯಲ್ಲಿ ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕನಾಗಿ ಎನ್.ರಂಗಸಾಮಿ ಅವರನ್ನು ಮರು ಆಯ್ಕೆ ಮಾಡಲಾಗಿದೆ. ಅಲ್ಲದೇ ಎ.ನಮಸ್ಸಿವಾಯಂ ಅವರು ಪಕ್ಷದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಪುದುಚೆರಿಯ 15ನೇ ವಿಧಾನಸಭೆಯನ್ನು ಮೇ 5ರಿಂದ ಜಾರಿಗೆ ಬರುವಂತೆ ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಶ್‌ನಾಥನ್ ಅವರು ಗುರುವಾರ ವಿಸರ್ಜಿಸಿದ್ದಾರೆ.
30 ಸದಸ್ಯ ಬಲದ ಪುದುಚೆರಿ ವಿಧಾನಸಭೆಗೆ ಏಪ್ರಿಲ್ 9 ರಂದು ಚುನಾವಣೆ ನಡೆದಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಿತ್ತು. ಎಐಎನ್‌ಆರ್‌ಸಿ 12 ಸ್ಥಾನಗಳನ್ನು ಮತ್ತು ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆದ್ದಿದೆ.
ಕಾಂಗ್ರೆಸ್ ಮತ್ತು ಎಐಎಡಿಎಂಕೆ ತಲಾ ಒಂದು ಸ್ಥಾನ, ಡಿಎಂಕೆ ಐದು ಸ್ಥಾನಗಳಲ್ಲಿ ಜಯ ಗಳಿಸಿತ್ತು. ತಮಿಳುನಾಡಿನಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಅಭೂತಪೂರ್ವ ಸಾಧನೆ ಮಾಡಿರುವ ಟಿವಿಕೆ ಕೂಡ ಇಲ್ಲಿ ಎರಡು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆದಿದೆ.

