ಕಾಸರಗೋಡು: ಪರಿಸರದೊಂದಿಗೆ ಒಡನಾಟ ಮೆರಯುತ್ತಾ ಎಳೆಯ ಪ್ರಾಯದಲ್ಲೇ ಪಕ್ಷಿಗಳ ಬಗ್ಗೆ ಅಧ್ಯಯನ ನಿರತಳಾಗಿರುವ ಪುಟಾಣಿಯೊಬ್ಬಳು ತನ್ನ 12ರ ಹರೆಯದಲ್ಲಿ 180ರಷ್ಟು ಪಕ್ಷಿಗಳನ್ನು ಗುರುತಿಸುವ ಮೂಲಕ ಸಾಧನೆ ಮೆರೆದಿದ್ದಾಳೆ.
ಕುಂಬಳೆ ಸನಿಹದ ಬೇಳ ಧರ್ಬೆತ್ತಡ್ಕ ನಿವಾಸಿ ಕೃಷಿಕ ಗೋಪಾಲಕೃಷ್ಣ ಹಾಗೂ ಚಾಯ್ಯೋತ್ ಹಯರ್ ಸೆಕಂಡರಿ ಶಾಲಾ ಅಧ್ಯಾಪಿಕೆ ಆಶಾಕಿರಣ ಅವರ ಪುತ್ರಿ ಹಾಗೂ ಬೇಳ ಸಂತ ಬಾರ್ತಲೋಮಯ ಹಿರಿಯ ಬುನಾದಿ ಶಾಲಾ ವಿದ್ಯಾರ್ಥಿನಿ ಕು. ನೆಹಾರಿಕಾ ಡಿ. ಈ ಸಾಧಕಿ. ಐದನೇ ತರಗತಿಯಿಂದ ಏಳನೇ ತರಗತಿ ವರೆಗಿನ ಕಾಲಾವಧಿಯಲ್ಲಿ ನೆಹಾರಿಕಾ ಈ ಸಾಧನೆ ಮಾಡಿದ್ದಾಳೆ.
ಮಕ್ಕಳೆಲ್ಲ ಮೊಬೈಲು ಹಿಡಿದು ವೀಡಿಯೋ ಗೇಮ್‍ಗಳಲ್ಲಿ ರಜಾ ಅವಧಿ ಕಳೆದರೆ ನೆಹಾರಿಕಾ ಮಾತ್ರ ಹೆಗಲಿಗೆ ಕ್ಯಾಮರಾ ಏರಿಸಿ ಗುಡ್ಡೆ, ಬಯಲು ನಡೆಯುತ್ತಾಳೆ. ಅಲ್ಲಿಮರ, ರೆಂಬೆಗಳ ಮಧ್ಯೆ ಪಕ್ಷಿಗಳನ್ನು ತನ್ನ ಕ್ಯಾಮರಾ ಕಣ್ಣಿನಿಂದ ಹುಡುಕಾಡುವ ಮೂಲಕ ಸುಂದರ ಫೊಟೋ ಕ್ಲಿಕ್ಕಿಸುವುದರ ಜತೆಗೆ ಇವುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ದಾಖಲಿಸಿಕೊಳ್ಳುವ ಬಾಲಕಿ ನೆಹರಿಕಾಳ ಹವ್ಯಾಸ ಇಂದು ಆಕೆಯನ್ನು ಪಕ್ಷಿ ಶೋಧಕಿಯನ್ನಾಗಿ ಬೆಳೆಸಿದೆ. ಜತೆಗೆ ತಾನು ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಅಪರೂಪದ ಪಕ್ಷಿಗಳ ಬಗ್ಗೆ ಸಮಗ್ರ ವಿವರಣೆ ಒಳಗೊಂಡ ಪಕ್ಷಿ ಜಾಲದ ಕೃತಿಯೊಂದನ್ನು ರಚಿಸಿದ್ದಾಳೆ. 'ಬಡ್ರ್ಸ್ ದ ಹಿಡೆನ್ ವಲ್ರ್ಡ್ ಇನ್ ಅವರ್ ಕ್ಯಾಂಪಸ್' ಎಂಬ ಈ ಕೃತಿಯನ್ನು ತಾತ್ಕಾಲಿಕವಾಗಿ ಮುದ್ರಣಮಾಡಿ ಕೆಲವೊಂದು ಪ್ರತಿಗಳನ್ನು ಶಾಲಾ ಸಮಾರಂಭದಲ್ಲಿ ಹಂಚಿದ್ದಾಳೆ. ಪಕ್ಷಿಗಳ ಪ್ರಾದೇಶಿಕ ಹೆಸರು, ವೈಜ್ಞಾನಿಕ ಹೆಸರು, ಅವುಗಳ ವೈಶಿಷ್ಟ್ಯ ಇತ್ಯಾದಿಗಳನ್ನೆಲ್ಲಾ ಟಿಪ್ಪಣಿ ಮಾಡಿ 180 ಪಕ್ಷಿ ಮಾಹಿತಿಗಳ ಕಾಫಿ ಟೇಬಲ್ ಬುಕ್ ಸಿದ್ಧ ಪಡಿಸಿಕೊಂಡಿದ್ದಾಳೆ.
ಅಧ್ಯಯನಶೀಲ ಪರಿಸರದ ಸಂಬಂಧಿ ಕೃತಿಯೊಂದನ್ನು ಸರ್ಕಾರವೇ ಮುಂದೆಬಂದು ವ್ಯವಸ್ಥಿತವಾಗಿ ಮುದ್ರಣಗೊಳಿಸಿ ಹಂಚುವ ಮೂಲಕ ಬಾಲಕಿಯ ಹವ್ಯಾಸವನ್ನು ಪೋಷಿಸುವ ಕಾರ್ಯವನ್ನು ನಡೆಸುವಂತೆ ಪರಿಸರವಾದಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಹೆತ್ತವರ ಪ್ರೋತ್ಸಾಹ:
ಪುತ್ರಿ ನೆಹಾರಿಕಾಳ ಪರಿಸರ ಹಾಗೂ ಪಕ್ಷಿಪ್ರೇಮವನ್ನು ಗುರುತಿಸಿದ ತಂದೆ ಗೋಪಾಲಕೃಷ್ಣ ಹಾಗೂ ತಾಯಿ ಆಶಾಕಿರಣ ಅವರು ಎಸ್‍ಎಲ್‍ಆರ್ ಕ್ಯಾಮರಾ ಖರೀದಿಸಿಕೊಟ್ಟಿದ್ದಾರೆ. ಇದೇ ಕ್ಯಾಮರಾದ ಮೂಲಕ ಏಳೆಂಟು ಎಕರೆ ವಿಸ್ತಾರದ ತನ್ನ ಶಾಲಾ ವಠಾರದಲ್ಲಿ ಪಕ್ಷಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾಳೆ. ನಾಲ್ಕನೇ ತರಗತಿಯ ಪಠ್ಯವೊಂದರಲ್ಲಿ ಪಕ್ಷಿಗಳ ಬಗೆಗಿನ ಪಾಠವೊಮದುನೆಹಾರಿಕಾಳನ್ನು ಪಕ್ಷಿಗಳ ಅಧ್ಯಯನದತ್ತ ಪ್ರೇರೇಪಿಸಿದೆ. ನೆಹಾರಿಕಾಳ ಪಕ್ಷಿ ಪ್ರೇಮಕ್ಕೆ ಪರಿಸರ ಪ್ರೇಮಿ, ಪಕ್ಷಿ ನಿರೀಕ್ಷಕ, ಶಿಕ್ಷಕ ರಾಜು ಕಿದೂರು ಬೆಂಬಲ ನೀಡಿ, ಆಕೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಿದ್ದಾರೆ. ರಾಜುಮಾಸ್ಟರ್ ಅವರ ನೆಚ್ಚಿನ ಶಿಷ್ಯೆಯಾಗಿ ನೆಹಾರಿಕಾ ಬೇಳ ಸಂತ ಬಾರ್ತಲೋಮಯ ಹಿರಿಯ ಬುನಾದಿ ಶಾಲೆಯಲ್ಲಿ ಏಳನೇ ತರಗತಿ ಪೂರೈಸಿದ್ದು, ಮುಂದಿನ ಶಿಕ್ಷಣದ ಜತೆಗೆ ಪಕ್ಷಿ ಲೋಕದ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾಳೆ.



