ನವದೆಹಲಿ: ನಾರ್ವೆ ಪ್ರವಾಸದ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಟು ಪ್ರಶ್ನೆಗಳನ್ನು ಕೇಳಿದ ನಾರ್ವೆಯ ಹಿರಿಯ ಪತ್ರಕರ್ತೆ ಹೆಲ್ಲೆ ಲಿಂಗ್ ಅವರು ಸದ್ಯ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ.
ಕೇವಲ ತಮ್ಮ ಪ್ರಶ್ನೆಗಳಿಗೆ ಉತ್ತರ ನಿರೀಕ್ಷಿಸಿದ್ದ ಪತ್ರಕರ್ತೆಗೆ ಈಗ ಬೆದರಿಕೆಗಳು ಬರುತ್ತಿದ್ದು, ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯಾರು ಹೆಲ್ಲೆ ಲಿಂಗ್?
ಹೆಲ್ಲೆ ಲಿಂಗ್ ಅವರು ಮೂಲತ ನಾರ್ವೆ ದೇಶದವರು. ಅಲ್ಲಿನ ಪತ್ರಿಕೋಧ್ಯಮದಲ್ಲಿ ಹೆಲ್ಲೆ ಲಿಂಗ್ ಹೆಸರು ಜನಪ್ರಿಯವಾಗಿದೆ. ಟಿವಿ ವಾಹಿನಿಗಳಲ್ಲಿ ಚರ್ಚೆ, ಯುಟ್ಯೂಬ್ ಚಾನೆಗಳಲ್ಲಿ ಅವರು ರಾಜಕೀಯ ವಿಶ್ಲೇಷಣೆ ಮಾಡುತ್ತಾರೆ. ಸದ್ಯ ಅವರು ಒಸ್ಲೊ ಮೂಲದ ಪ್ರಖ್ಯಾತ 'ಡಾಗ್ಸಾವಿಸೆನ್' ಪತ್ರಿಕೆಯ ರಾಜಕೀಯ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ.
ಪ್ರಧಾನಿ ಮೋದಿಯವರ ನಾರ್ವೆ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಹೆಲ್ಲೆ ಲಿಂಗ್ ಅವರು ಮೋದಿ ಪ್ರವಾಸದ ವರದಿಗಾರಿಕೆಯ ನೇತೃತ್ವ ವಹಿಸಿದ್ದರು.
ವಿವಾದಕ್ಕೆ ಕಾರಣವಾದ ಆ ಪ್ರಶ್ನೆ ಏನು?
3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ನಾರ್ವೆಗೆ ಭೇಟಿ ನೀಡಿದ್ದರು. ಈ ವೇಳೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ ಅಧಿಕೃತ ಸುದ್ದಿಗೋಷ್ಠಿಯಲ್ಲಿ ಹೆಲ್ಲೆ ಲಿಂಗ್ ಕೇಳಿದ ನೇರ ಪ್ರಶ್ನೆಗಳು ವಿವಾದಕ್ಕೆ ಕಾರಣವಾಗಿದ್ದವು.
ನಾವು ನಮ್ಮ ಪಾಲುದಾರಿಕೆಯನ್ನು ಬಲಪಡಿಸುತ್ತಿರುವಾಗ, ನಾವು ನಿಮ್ಮನ್ನು (ಭಾರತವನ್ನು) ಏಕೆ ನಂಬಬೇಕು? ನಿಮ್ಮ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಪ್ರಯತ್ನಿಸುತ್ತೇನೆ ಎಂದು ನೀವು ಭರವಸೆ ನೀಡಬಲ್ಲಿರಾ? ಹಾಗೆಯೇ, ಪ್ರಧಾನಮಂತ್ರಿಯವರು ಮುಂದಿನ ದಿನಗಳಲ್ಲಾದರೂ ಭಾರತೀಯ ಮಾಧ್ಯಮಗಳಿಂದ ಇಂತಹ ಕಟು ಪ್ರಶ್ನೆಗಳನ್ನು ಎದುರಿಸಲು ಪ್ರಾರಂಭಿಸುತ್ತಾರಾ? ಸಾಧ್ಯವಾದರೆ ಇದಕ್ಕೆ ನೇರ ಉತ್ತರವನ್ನೇ ನೀಡಿ ಎಂದು ಲಿಂಗ್ ಪ್ರಶ್ನಿಸಿದ್ದರು.
ಈ ಗಂಭೀರ ಪ್ರಶ್ನೆಗೆ ವಿದೇಶಾಂಗ ಇಲಾಖೆಯು ಜಾಗತಿಕ ಸಂಸ್ಕೃತಿಗೆ ಭಾರತದ ಕೊಡುಗೆಗಳಾದ ಶೂನ್ಯ, ಯೋಗ ಮತ್ತು ಚದುರಂಗ ಆಟಗಳ ಬಗ್ಗೆ ವಿವರಣೆ ನೀಡುವ ಮೂಲಕ ಉತ್ತರಿಸಲು ಯತ್ನಿಸಿತು. ಇದು ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿತು. ನಂತರ, ಪ್ರಧಾನಿ ಮೋದಿ ಭೇಟಿ ಕುರಿತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಒಸ್ಲೊದಲ್ಲಿ ನಡೆಸಲಿರುವ ಪತ್ರಿಕಾಗೋಷ್ಠಿಗೆ ಆಗಮಿಸುವಂತೆ ಪತ್ರಕರ್ತೆ ಹೆಲ್ಲೆ ಲಿಂಗ್ ಅವರನ್ನು ರಾಯಭಾರ ಕಚೇರಿಯು ಆಹ್ವಾನಿಸಿತು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಪತ್ರಕರ್ತೆ ಲಿಂಗ್, ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ, ಅವರು ಉತ್ತರಿಸುತ್ತಾರೆ ಎಂಬ ನಿರೀಕ್ಷೆಯೂ ನನಗಿರಲಿಲ್ಲ. ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಭಾರತ 157ನೇ ಸ್ಥಾನದಲ್ಲಿದೆ. ನಾವು ಯಾರೊಂದಿಗೆ ಸಹಕರಿಸುತ್ತೇವೆಯೊ ಅವರನ್ನು ಪ್ರಶ್ನೆ ಮಾಡುವುದು ಕೂಡ ನಮ್ಮ ಕೆಲಸ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಗೂಢಚಾರಿಣಿ ಪಟ್ಟ, ಸಾಮಾಜಿಕ ಜಾಲತಾಣ ಖಾತೆಗಳು ಬ್ಲಾಕ್!
ಈ ಘಟನೆಯ ಬೆನ್ನಲ್ಲೇ ಪತ್ರಕರ್ತೆ ಹೆಲ್ಲೆ ಲಿಂಗ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮತ್ತು ಬೆದರಿಕೆಗಳು ಬರಲಾರಂಭಿಸಿವೆ. ಅಷ್ಟೇ ಅಲ್ಲದೆ, ಅವರನ್ನು 'ವಿದೇಶಿ ಗೂಢಚಾರಿಣಿ' ಎಂದು ಬಿಂಬಿಸಲಾಗುತ್ತಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ನಾನು ಇದನ್ನು ಬರೆಯಬೇಕಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನಾನು ಯಾವುದೇ ವಿದೇಶಿ ಸರ್ಕಾರದ ಗೂಢಚಾರಿಣಿ ಅಲ್ಲ. ಪತ್ರಿಕೋದ್ಯಮ ನನ್ನ ವೃತ್ತಿ ಎಂದಿದ್ದಾರೆ. ಇದೀಗ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ.

