ನವದೆಹಲಿ: ದೇಶದಾದ್ಯಂತ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಭಾರತದ ಚುನಾವಣಾ ಆಯೋಗದ ಅಧಿಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ(ಮೇ 27) ಎತ್ತಿಹಿಡಿದಿದೆ.
ಸಂವಿಧಾನದಲ್ಲಿರುವಂತೆ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಎಸ್‌ಐಆರ್ ಆಗತ್ಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ಚುನಾವಣಾ ಆಯೋಗವು ಸಂವಿಧಾನದ 326ನೇ ವಿಧಿ, 1950ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ದೊಡ್ಡ ಪ್ರಮಾಣದ ಎಸ್‌ಐಆರ್ ನಡೆಸುವ ಅಧಿಕಾರವನ್ನು ಹೊಂದಿಲ್ಲ ಎಂದು ಆರೋಪಿಸಿ, ಅರ್ಜಿ ಸಲ್ಲಿಸಲಾಗಿತ್ತು. 2026ರ ಜ. 29ರಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎನ್ನುವ ಎನ್‌ಜಿಒ ಸೇರಿದಂತೆ ಇತರರು ಸಲ್ಲಿಸಿದ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು.
ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ, ಅಲ್ಲಿ ಮೊದಲ ಹಂತದಲ್ಲಿ ಎಸ್‌ಐಆರ್ ನಡೆಸಲಾಗಿತ್ತು. ಮತದಾರರ ಪಟ್ಟಿಗಳ ಪರಿಷ್ಕರಣೆಯು ಎನ್‌ಆರ್‌ಸಿ ತರಹದ ಪ್ರಕ್ರಿಯೆಯಾಗಿದ್ದು, ಚುನಾವಣಾ ಆಯೋಗವು ನಾಗರಿಕರ ಪೌರತ್ವವನ್ನು ಪರಿಶೀಲಿಸುತ್ತಿದೆ. ಈ ಅಧಿಕಾರವು ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂದು ಅರ್ಜಿದಾರರು ಆರೋಪಿಸಿದ್ದರು.

