ಜಾರಿ ನಿರ್ದೇಶನಾಲಯ(ED) ಚಾಂಡೆಲ್ ಸಲ್ಲಿಸಿದ್ದ ನಿಯಮಿತ ಜಾಮೀನು ಅರ್ಜಿಯನ್ನು ವಿರೋಧಿಸದೇ ಇರುವುದನ್ನು ನ್ಯಾಯಾಲಯ ದಾಖಲಿಸಿಕೊಂಡಿದ್ದು, ತನಿಖೆಯ ಅವಧಿಯಲ್ಲಿ ಅವರು ನೀಡಿದ 'ಸ್ವಯಂಪ್ರೇರಿತ ಮತ್ತು ಉದ್ದೇಶಪೂರ್ವಕ ಸಹಕಾರ'ವನ್ನು ಪರಿಗಣಿಸಿ ಜಾಮೀನು ನೀಡಲಾಗಿದೆ. ಆದರೆ, ಸಾಕ್ಷ್ಯಗಳನ್ನು ಹಾಳು ಮಾಡಬಾರದು ಹಾಗೂ ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ತಮ್ಮ ತಾಯಿ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆ ಮಾನವೀಯ ಆಧಾರದ ಮೇಲೆ ಮಧ್ಯಂತರ ಪರಿಹಾರವನ್ನು ನೀಡುವಂತೆ ಚಾಂಡೆಲ್ ಮನವಿ ಮಾಡಿದ್ದರು. ಈ ಅಂಶವನ್ನೂ ನ್ಯಾಯಾಲಯ ಗಮನಿಸಿದೆ.
"ತನಿಖೆಯ ವೇಳೆ ವಿನೇಶ್ ಚಾಂಡೆಲ್ ನೀಡಿದ ಸ್ವಯಂಪ್ರೇರಿತ ಮತ್ತು ಉದ್ದೇಶಪೂರ್ವಕ ಸಹಕಾರವನ್ನು ಗಮನದಲ್ಲಿಟ್ಟುಕೊಂಡು ಹಾಗೂ ED ಹಕ್ಕುಗಳಿಗೆ ಯಾವುದೇ ಹಾನಿಯಾಗದಂತೆ, ಪ್ರಸ್ತುತ ಜಾಮೀನು ಅರ್ಜಿಯನ್ನು ವಿರೋಧಿಸುವುದಿಲ್ಲ" ಎಂದು ಕೇಂದ್ರ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.
ಪೀಠವು ಚಾಂಡೆಲ್ ರಿಗೆ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು, ತನಿಖಾಧಿಕಾರಿಗಳು ಕೇಳುವ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕು ಮತ್ತು ತನಿಖೆಯ ಅವಧಿಯಲ್ಲಿ ಲಭ್ಯವಿರಬೇಕು ಎಂದು ಸೂಚಿಸಿದೆ.
ಚಾಂಡೆಲ್ ಪರವಾಗಿ ಹಾಜರಾದ ಹಿರಿಯ ವಕೀಲ ವಿಕಾಸ್ ಪಹ್ವಾ, "ನಾವು ಕೆಲವು ದಿನಗಳ ಹಿಂದೆ ಜಾಮೀನು ಅರ್ಜಿ ಸಲ್ಲಿಸಿದ್ದೇವೆ. ED ತನ್ನ ಉತ್ತರವನ್ನು ಸಲ್ಲಿಸುವ ವೇಳೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ನನ್ನ ಕಕ್ಷಿದಾರರದು ತನಿಖಾ ಸಂಸ್ಥೆಯೊಂದಿಗೆ ಪೂರ್ಣ ಸಹಕಾರ ನೀಡಿದ್ದಾರೆ ಎಂಬುದೇ ಪ್ರಮುಖ ಕಾರಣ" ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ED ಪ್ರಕಾರ, ಚಾಂಡೆಲ್ ಸಂಬಂಧಿಸಿದ ಸಲಹಾ ಸಂಸ್ಥೆ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದು, ತನಿಖೆಯಲ್ಲಿ ಹಲವು ಹಣಕಾಸು ಅಕ್ರಮಗಳು ಬಹಿರಂಗಗೊಂಡಿವೆ. ಲೆಕ್ಕಪತ್ರ ಹಾಗೂ ಲೆಕ್ಕಪತ್ರವಿಲ್ಲದ ಹಣಗಳ ಸ್ವೀಕೃತಿ, ಕಾನೂನುಬದ್ಧ ವ್ಯವಹಾರ ಬೆಂಬಲವಿಲ್ಲದ ಅಸುರಕ್ಷಿತ ಸಾಲಗಳು, ನಕಲಿ ಇನ್ವಾಯ್ಸ್ಗಳ ವಿತರಣೆ ಮತ್ತು ಮೂರನೇ ವ್ಯಕ್ತಿಗಳ ಮೂಲಕ ಹಣ ವರ್ಗಾವಣೆ ಸೇರಿದಂತೆ ಹಲವು ಅಕ್ರಮಗಳು ನಡೆದಿರುವುದಾಗಿ ಆರೋಪಿಸಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಎಪ್ರಿಲ್ 13ರಂದು ಚಾಂಡೆಲ್ ಅವರನ್ನು ಬಂಧಿಸಲಾಗಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣದಲ್ಲಿ ಅಕ್ರಮ ಹಣದ ವ್ಯವಹಾರಗಳಲ್ಲಿ ಅವರು ಸಕ್ರಿಯರಾಗಿದ್ದರು ಎಂಬ ಪ್ರಾಥಮಿಕ ಸಾಕ್ಷ್ಯಗಳಿವೆ ಎಂದು ನ್ಯಾಯಾಲಯ ಈ ಹಿಂದೆ ಅಭಿಪ್ರಾಯಪಟ್ಟಿತ್ತು.
ಈ ಬಂಧನ ರಾಜಕೀಯ ವಿವಾದಕ್ಕೂ ಕಾರಣವಾಯಿತು. ತೃಣಮೂಲ ಕಾಂಗ್ರೆಸ್, ಇದು ರಾಜಕೀಯ ಪ್ರೇರಿತ ಕ್ರಮವಾಗಿದ್ದು, ವಿರೋಧ ಪಕ್ಷಗಳಿಗೆ ಸಲಹೆ ನೀಡುವವರನ್ನು ಬೆದರಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದೆ. ಆದರೆ, ಅಧಿಕಾರಿಗಳು ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಕಾನೂನು ಪ್ರಕ್ರಿಯೆಯಂತೆ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.

