ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿನ ಬಾರ್ಗಿ ಅಣೆಕಟ್ಟು ಬಳಿ ದುರಂತಕ್ಕೀಡಾದ ಪ್ರವಾಸಿ ಬೋಟ್‌ನಲ್ಲಿದ್ದ ಇನ್ನೂ ಐವರ ಮೃತದೇಹಗಳನ್ನು ಶುಕ್ರವಾರ(ಮೇ 1) ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದ್ದು, ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.
ಗುರುವಾರ ಸಂಜೆ ಬೋಟ್‌ನಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವಾಗ ಅದು ಹಠಾತ್ ಬಿರುಗಾಳಿಗೆ ಸಿಲುಕಿ, ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತವಾದ ತಕ್ಷಣವೇ ನಾಲ್ಕು ಜನರ ಮೃತದೇಹ ಸಿಕ್ಕಿತ್ತು, ಇದೀಗ ಐದು ಮಂದಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿದೆ. ಇದುವರೆಗೆ 28 ಜನರನ್ನು ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಬಲ್ಪುರ ಜಿಲ್ಲೆಯ ಬಾರ್ಗಿ ಬಳಿ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲಾಶಯದಲ್ಲಿ ಬೋಟ್ ಮುಗುಚಿ ದುರಂತ ಸಂಭವಿಸಿದ್ದು, ಇನ್ನೂ 6 ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಧ್ಯಪ್ರದೇಶ ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್ ಸಿಂಗ್ ಲೋಧಿ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ನಂತರ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ. ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಾಣೆಯಾದ ಪ್ರಯಾಣಿಕರಿಗಾಗಿ ಸೇನೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. ಹೈಡ್ರಾಲಿಕ್ ಕ್ರೇನ್‌ಗಳನ್ನು ಬಳಸಿಕೊಂಡು ಬೋಟ್ ಅನ್ನು ಜಲಮೂಲದಿಂದ ಹೊರತಗೆಯಲಾಗಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ರಾಕೇಶ್ ಸಿಂಗ್ ತಿಳಿಸಿದ್ದಾರೆ.

