ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ NEET-UG 2026ರ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಹೊಸದಾಗಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಜೂನ್ 21ರಂದು NEET-UG 2026 ಮರುಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದಾಗ, ಹೊಸ ಪರೀಕ್ಷೆಗೆ ಅಭ್ಯರ್ಥಿಗಳಿಂದ ಯಾವುದೇ ಪರೀಕ್ಷಾ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು NTA ತಿಳಿಸಿತ್ತು. ಅಲ್ಲದೆ, ವಿದ್ಯಾರ್ಥಿಗಳು ಈಗಾಗಲೇ ಪಾವತಿಸಿರುವ ಶುಲ್ಕವನ್ನು ಮರುಪಾವತಿ ಮಾಡಲಾಗುವುದು ಎಂದು ಹೇಳಿತ್ತು.
ಮೇ 12 ಮತ್ತು ಮೇ 22ರ ಸಾರ್ವಜನಿಕ ಪ್ರಕಟಣೆಗಳ ಮುಂದುವರಿದ ಭಾಗವಾಗಿ ಎನ್‌ಟಿಎ, ಮೇ 22ರಿಂದ ಮೇ 26ರವರೆಗೆ NEET-UG 2026 ನೋಂದಣಿ ಪೋರ್ಟಲ್‌ನಲ್ಲಿ ಶುಲ್ಕ ಮರುಪಾವತಿ ಪ್ರಕ್ರಿಯೆಗಾಗಿ ಆದ್ಯತೆಯ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಲು ಸೌಲಭ್ಯ ಕಲ್ಪಿಸಿತ್ತು.
ಬುಧವಾರ 'ಎಕ್ಸ್'ನಲ್ಲಿ ಹಂಚಿಕೊಂಡ ನೋಟಿಸ್‌ನಲ್ಲಿ, ಇದುವರೆಗೆ ಸುಮಾರು 13 ಲಕ್ಷ ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನವೀಕರಿಸಿದ್ದಾರೆ ಎಂದು NTA ತಿಳಿಸಿದೆ.
ಇನ್ನೂ ತಮ್ಮ ವಿವರಗಳನ್ನು ಸಲ್ಲಿಸದ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಲು ಗಡುವನ್ನು ವಿಸ್ತರಿಸಲಾಗಿದೆ ಎಂದು NTA ಹೇಳಿದೆ.

