ದೀರ್ಘಕಾಲದ ಅನುಸರಿಸಿಕೊಂಡು ಬರುತ್ತಿದ್ದ ಶಿಷ್ಟಾಚಾರವನ್ನು ಬದಲಾಯಿಸಿರುವುದರ ವಿರುದ್ಧ ವಿರೋಧ ಪಕ್ಷ ಡಿಂಎಕೆ ಅಸಮಾಧಾನ ವ್ಯಕ್ತಪಡಿಸಿದೆ.
ಟಿವಿಕೆ ಮಿತ್ರಪಕ್ಷಗಳಾದ ವಿಸಿಕೆ ಮತ್ತು ಸಿಪಿಐ ಇದಕ್ಕೆ ಸ್ಪಷ್ಟನೆ ಕೇಳಿವೆ.
ನಾಡಗೀತೆಗೆ ಸಂಬಂಧಪಟ್ಟಂತೆ ತಮಿಳುನಾಡಿನಲ್ಲಿ ಅನೇಕ ಬಾರಿ ವಿವಾದಗಳಾಗಿವೆ. ನಾಡಗೀತೆ ಹಾಡುವಾಗ ಎದ್ದುನಿಲ್ಲಬೇಕು ಎನ್ನುವುದರಿಂದ ಹಿಡಿದು ಅಧಿವೇಶನದಲ್ಲಿ ನಾಡಗೀತೆ ಪ್ರಾಮುಖ್ಯತೆ ಕೊಟ್ಟಿರುವವರೆಗೂ ವಿವಾದ ಮುಂದುವರಿದಿದೆ.
ನಾಡಗೀತೆ ಮತ್ತು ವಿವಾದ
ವಿಜಯೇಂದ್ರ ಸರಸ್ವತಿ ಪ್ರಕರಣ: 2018ರಲ್ಲಿ ಅಂದಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಈ ಗೀತೆಯನ್ನು ನುಡಿಸುವಾಗ ಕಂಚಿ ಶ್ರೀಗಳಾದ ವಿಜಯೇಂದ್ರ ಸರಸ್ವತಿಯವರು ಕುಳಿತಲ್ಲೇ ಉಳಿದದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆಯು ತಮಿಳು ಪರ ಗುಂಪುಗಳಿಂದ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು.
ನಂತರ ಈ ವಿವಾದವು ಮದ್ರಾಸ್ ಹೈಕೋರ್ಟ್ ತಲುಪಿತು. 2021 ರಲ್ಲಿ ನ್ಯಾಯಾಲಯವು 'ತಮಿಳ್ ತಾಯ್ ವಾಜ್ತು' ಮೂಲಭೂತವಾಗಿ ಒಂದು 'ಪ್ರಾರ್ಥನಾ ಗೀತೆ'ಯಾಗಿದೆಯೇ ಹೊರತು ಒಂದು ರಾಷ್ಟ್ರಗೀತೆಯಲ್ಲ ಎಂದು ಅಭಿಪ್ರಾಯಪಟ್ಟಿತು. ಈ ಗೀತೆಯು ಅತ್ಯುನ್ನತ ಗೌರವ ಮತ್ತು ಮರ್ಯಾದೆಗೆ ಅರ್ಹವಾಗಿದೆ ಎಂದು ಹೇಳಿದ ನ್ಯಾಯಾಲಯ, ಹಾಡುವಾಗ ಜನರು ಎದ್ದು ನಿಲ್ಲಬೇಕು ಎಂಬ ಅಗತ್ಯವಿಲ್ಲ ಎಂದು ತೀರ್ಪು ನೀಡಿತು.
ಆರ್.ಎನ್. ರವಿ ವರ್ಸ್‌ಸ್ ಡಿಎಂಕೆ: ನಾಡಗೀತೆಯನ್ನು ಮೊದಲು ಹಾಡಬೇಕು ಎಂಬ ನಿಯಮವು ಮಾಜಿ ರಾಜ್ಯಪಾಲ ಆರ್.ಎನ್. ರವಿ ಮತ್ತು ಡಿಎಂಕೆ ಸರ್ಕಾರದ ನಡುವೆ ದೊಡ್ಡ ಸಂಘರ್ಷಕ್ಕೆ ಕಾರಣವಾಗಿತ್ತು. ಇದು ರಾಷ್ಟ್ರೀಯಮಟ್ಟದಲ್ಲಿ ಸುದ್ದಿಯಾಗಿತ್ತು.
2024ರಲ್ಲಿ ರಾಜ್ಯಪಾಲರ ಭಾಷಣದ ಆರಂಭದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗಿಲ್ಲ ಎಂದು ಆರೋಪಿಸಿ ಆರ್.ಎನ್. ರವಿಅವರು ತಮಿಳುನಾಡು ವಿಧಾನಸಭೆಯಿಂದ ಹೊರನಡೆದಿದ್ದರು. ಅಧಿವೇಶನ ಪ್ರಾರಂಭದಲ್ಲಿ ಕೇವಲ 'ತಮಿಳ್ ತಾಯ್ ವಾಜ್ತು' ಹಾಡನ್ನು ಮಾತ್ರ ಹಾಡಿದ್ದು, ರಾಜ್ಯ ಸರ್ಕಾರವು ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅವಮಾನ ಮಾಡಿದೆ ಎಂದು ರಾಜಭವನ ಆರೋಪಿಸಿತ್ತು.
ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಡಿಎಂಕೆ ಸರ್ಕಾರ, ಅಧಿಕೃತ ಕಲಾಪಗಳನ್ನು ತಮಿಳು ತಾಯಿ ವಾಳ್ತುನೊಂದಿಗೆ ಪ್ರಾರಂಭಿಸಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸುವ ಪದ್ಧತಿಯನ್ನು ತಮಿಳುನಾಡು ಬಹಳ ಕಾಲದಿಂದ ಅನುಸರಿಸುತ್ತಿದೆ ಎಂದು ಹೇಳಿತ್ತು.
ಅಲ್ಲದೇ, ಅಂದಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ರಾಜ್ಯಪಾಲರು ವಿಧಾನಸಭೆಯ ಸಂಪ್ರದಾಯಗಳನ್ನು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ ಮತ್ತು ಅನಗತ್ಯವಾಗಿ ಸಂಘರ್ಷವನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಭಾನುವಾರ ವಿಜಯ್ ಅವರ ಪ್ರಮಾಣವಚನ ಸಮಾರಂಭದಲ್ಲಿ ನಡೆದ ವಿವಾದವು ತಮಿಳುನಾಡಿನಲ್ಲಿ 'ತಮಿಳ್ ತಾಯ್ ವಾಜ್ತು'ಗೆ ಸಂಬಂಧಿಸಿದ ರಾಜಕೀಯ ಸಂಘರ್ಷಗಳ ಸರಣಿಯಲ್ಲಿ ಇತ್ತೀಚಿನದ್ದಾಗಿದೆ.
ವಂದೇ ಮಾತರಂ: ಟಿವಿಕೆ ಮಿತ್ರಪಕ್ಷಗಳಿಂದಲೇ ಆಕ್ಷೇಪ
ನಾಡಗೀತೆ 'ತಮಿಳ್ ತಾಯ್ ವಾಜ್ತು' ಹಾಡುವುದಕ್ಕೂ ಮೊದಲು 'ವಂದೇ ಮಾತರಂ' ಹಾಡಿರುವ ಬಗ್ಗೆ ಟಿವಿಕೆ ಮಿತ್ರ ಪಕ್ಷಗಳಾದ ವಿಸಿಕೆ, ಸಿಪಿಐ ಆಕ್ಷೇಪ ವ್ಯಕ್ತಪಡಿಸಿವೆ.
'ಲೋಕಭವನದ ನಿರ್ದೇಶನದ ಮೇರೆಗೆ ನಾಡಗೀತೆಗೆ ಈ ರೀತಿ ಮೂರನೇ ಸ್ಥಾನ ನೀಡಲಾಗಿದ್ದು, ಇದು ನಿಯಮಗಳ ಉಲ್ಲಂಘನೆಯಾಗಿದೆ. ತಮಿಳುನಾಡು ಸರ್ಕಾರವು ಈ ಬಗ್ಗೆ ಸಾರ್ವಜನಿಕ ಸ್ಪಷ್ಟನೆ ನೀಡಬೇಕಿದೆ. ಜತೆಗೆ ಈ ಲೋಪಕ್ಕೆ ಕಾರಣರಾದವರನ್ನು ಗುರುತಿಸಬೇಕಿದೆ' ಎಂದೂ ಸಿಪಿಐನ ಕಾರ್ಯದರ್ಶಿ ಎಂ.ವೀರ ಪಾಂಡ್ಯನ್ ಆಗ್ರಹಿಸಿದ್ದಾರೆ.
ನಾಡಗೀತೆಯನ್ನು ಕೊನೆಯಲ್ಲಿ ಹಾಡಿರುವುದನ್ನು ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಳವನ್ ಕೂಡ ಖಂಡಿಸಿದ್ದಾರೆ.
'ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ನಾಡಗೀತೆಗೆ ಸೂಕ್ತ ಪ್ರಾಮುಖ್ಯತೆ ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವಂತೆ' ಪಿಎಂಕೆ ಸಂಸ್ಥಾಪಕ ಎಸ್. ರಾಮದಾಸ್ ಒತ್ತಾಯಿಸಿದ್ದಾರೆ.
'ತಮಿಳುನಾಡಿನಲ್ಲಿ ತಮಿಳು ಗೀತೆಯನ್ನು ಮೊದಲು ಹಾಡಲಾಗುತ್ತದೆ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ. ಇದು ಇಲ್ಲಿನ ಸ್ಥಾಪಿತ ಕಾರ್ಯವಿಧಾನವಾಗಿದೆ' ಎಂದು ವಿರೋಧ ಪಕ್ಷ ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್ ಹೇಳಿದ್ದಾರೆ.
ಟಿವಿಕೆ ಸ್ಪಷ್ಟನೆ
ಶಿಷ್ಟಾಚಾರ ಬದಲಾವಣೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಲೇ, ವಿಜಯ್ ನೇತೃತ್ವದ ಸರ್ಕಾರ ಇದನ್ನು ಬೆಂಬಲಿಸುವುದಿಲ್ಲ ಎಂದು ಟಿವಿಕೆ ಮುಖಂಡ ಆಧವ್ ಅರ್ಜುನ್ ಹೇಳಿದ್ದಾರೆ.
ಈ ಕ್ರಮವು 'ತಮಿಳುನಾಡಿಗೆ ಸೂಕ್ತವಲ್ಲ' ಎಂದು ಕರೆದ ಅವರು, 'ತಮಿಳ್ ತಾಯ್ ವಾಜ್ತು' ಹಾಡನ್ನು ಕೊನೆಯಲ್ಲಿ ಹಾಡಿದ್ದಕ್ಕೆ ರಾಜ್ಯಪಾಲರ ಕಚೇರಿ ವಿರುದ್ಧ ಟಿವಿಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಸುತ್ತೋಲೆಯ ಪ್ರಕಾರ ರಾಜ್ಯಪಾಲರು ಕಾರ್ಯನಿರ್ವಹಿಸಬೇಕಿದೆ ಎಂದು ರಾಜಭವನವು ನಮಗೆ ತಿಳಿಸಿದೆ ಎಂದು ತಿಳಿಸಿದ್ದಾರೆ.
ಮುಂದುವರಿದು, ಮುಂದೆ ನಡೆಯಲಿರುವ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮೊದಲಿನ ಪದ್ಧತಿಯಂತೆ - ಆರಂಭದಲ್ಲಿ 'ತಮಿಳ್ ತಾಯ್ ವಾಜ್ತು' ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ನಡೆಯಲಿವೆ ಎಂದು ಭರವಸೆ ನೀಡಿದ್ದಾರೆ.
ಭಾರತದ ಪ್ರತಿಯೊಂದು ರಾಜ್ಯವು ಅಧಿಕೃತ ಕಾರ್ಯಕ್ರಮಗಳನ್ನು ತನ್ನ ನಾಡಗೀತೆಯೊಂದಿಗೆ ಪ್ರಾರಂಭಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ವಂದೇ ಮಾತರಂಗೆ ಆದ್ಯತೆ
ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವುದು/ನುಡಿಸುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಜನವರಿಯಲ್ಲಿ ಹೊರಡಿಸಿತ್ತು. ವಂದೇ ಮಾತರಂ ಮತ್ತು ಜನ ಗಣ ಮನ ಎರಡನ್ನೂ ನುಡಿಸುವ ವೇಳೆ, ವಂದೇ ಮಾತರಂ ಅನ್ನು ಮೊದಲು ಪ್ರಸ್ತುತಪಡಿಸಬೇಕು ಎಂದು ಮಾರ್ಗಸೂಚಿಗಳು ತಿಳಿಸಿದ್ದವು.
ನಾಡಗೀತೆಪರಿಚಯ
'ನೀರಾರುಂ ಕಡಲುಡುತ...' ಎಂದು ಪ್ರಾರಂಭವಾಗುವ 'ತಮಿಳ್ ತಾಯ್ ವಾಜ್ತು' ಗೀತೆಯನ್ನು ವಿದ್ವಾಂಸ ಪಿ. ಸುಂದರಂ ಪಿಳ್ಳೈ ಅವರು ಬರೆದ 'ಮನೋನ್ಮಣಿಯಂ' ಎಂಬ ತಮಿಳು ನಾಟಕದಿಂದ ಆಯ್ದುಕೊಳ್ಳಲಾಗಿದೆ. 1970ರಲ್ಲಿ ತಮಿಳುನಾಡು ಸರ್ಕಾರವು ಸರ್ಕಾರಿ ಕಾರ್ಯಕ್ರಮಗಳು, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಪ್ರಾರಂಭದಲ್ಲಿ ಇದನ್ನು ಹಾಡಬೇಕೆಂದು ನಿರ್ದೇಶಿಸಿತ್ತು. 2021ರಲ್ಲಿ ಸ್ಟಾಲಿನ್ ಸರ್ಕಾರವು ಇದನ್ನು ಅಧಿಕೃತವಾಗಿ ತಮಿಳುನಾಡಿನ 'ನಾಡಗೀತೆ' ಎಂದು ಘೋಷಿಸಿದ್ದಲ್ಲದೇ ವಿಕಲಚೇತನರನ್ನು ಹೊರತುಪಡಿಸಿ ಉಳಿದವರು ಈ ಹಾಡು ಪ್ರಸಾರವಾಗುವಾಗ ಎದ್ದು ನಿಲ್ಲಬೇಕು ಎಂದು ಕಡ್ಡಾಯಗೊಳಿಸಿದೆ.

