HEALTH TIPS

ಸಾವರ್ಕರ್ 10 ಬಾರಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು: ಮರಿ ಮೊಮ್ಮಗ ಸತ್ಯಕಿ

 ಪುಣೆ: ವಿನಾಯಕ ದಾಮೋದರ ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರದ ಮುಂದೆ 10 ಬಾರಿ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ್ದರು ಎಂದು ಅವರ ಮರಿ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸತ್ಯಕಿ ಸಾವರ್ಕರ್ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ವಿಶೇಷ ನ್ಯಾಯಾಧೀಶ ಅಮೋಲ್ ಶಿಂಧೆ ಅವರಿದ್ದ ಪೀಠದ ಮುಂದೆ ಸೋಮವಾರ ನಡೆದ ಅಡ್ಡ-ಸವಾಲಿನ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.

ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ಅವರು ಸತ್ಯಕಿ ಅವರನ್ನು ಅಡ್ಡ-ಸವಾಲು ನಡೆಸಿದರು.

'ಸಾವರ್ಕರ್ ಹತ್ತು ಬಾರಿ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿರುವುದು ನಿಜ. ಆ ಸಮಯದಲ್ಲಿಯೂ ಅವರನ್ನು 'ವೀರ' ಎಂದು ಕರೆಯಲಾಗುತ್ತಿತ್ತು. ಹತ್ತು ಬಾರಿ ಕ್ಷಮಾದಾನ ಅರ್ಜಿ ಸಲ್ಲಿಸಿದ ವ್ಯಕ್ತಿಯನ್ನು 'ವೀರ' ಎಂದು ಕರೆಯುವುದು ವಿರೋಧಾಭಾಸ ಎಂಬುದು ಸರಿಯಲ್ಲ' ಎಂದು ಸತ್ಯಕಿ ಹೇಳಿದ್ದಾರೆ.

ಅಂಡಮಾನ್ ಜೈಲಿಗೆ ಕಳುಹಿಸುವುದಕ್ಕೂ ಮುನ್ನವೇ ಗದರ್ ಸಂಘಟನೆಯ ನಿಯತಕಾಲಿಕೆಯಲ್ಲಿ ಸಾವರ್ಕರ್ ಅವರನ್ನು 'ವೀರ' ಎಂದು ಉಲ್ಲೇಖಿಸಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ಅದೇ ಕಾಲದ ಕ್ರಾಂತಿಕಾರಿಗಳಾದ ರಾಜಗುರು, ಬಟುಕೇಶ್ವರ ದತ್ ಹಾಗೂ ಅಶ್ಫಾಕುಲ್ಲಾ ಖಾನ್ ಕ್ಷಮಾದಾನ ಅರ್ಜಿ ಸಲ್ಲಿಸಿರಲಿಲ್ಲ ಎಂಬುದನ್ನು ಸತ್ಯಕಿ ಒಪ್ಪಿಕೊಂಡಿದ್ದಾರೆ.

ಸಾವರ್ಕರ್ ಶಿಕ್ಷೆ ವಿಧಿಸಲ್ಪಟ್ಟ ಮೊದಲ ತಿಂಗಳಲ್ಲಿಯೇ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು ಎಂಬುದನ್ನೂ ಅವರು ದೃಢಪಡಿಸಿದ್ದಾರೆ.

'ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ಬ್ರಿಟಿಷ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ತಮ್ಮನ್ನು ಯುದ್ಧ ಕೈದಿಗಳಂತೆ ಪರಿಗಣಿಸಬೇಕು ಎಂದು ಕೋರಿದ್ದರು ಹಾಗೂ ಯಾವುದೇ ರಿಯಾಯಿತಿ ಅಥವಾ ದಯಾ ಕ್ರಮಗಳನ್ನು ನಿರಾಕರಿಸಿದ್ದರು ಎಂಬುದು ನನಗೆ ತಿಳಿದಿರಲಿಲ್ಲ. ಆದರೆ ಅವರು ಕೊನೆಯವರೆಗೂ ತಮ್ಮ ತತ್ವ ಮತ್ತು ಸಿದ್ಧಾಂತಗಳಲ್ಲಿ ದೃಢವಾಗಿ ನಿಂತಿದ್ದರು. ಬ್ರಿಟಿಷರೊಂದಿಗೆ ನಡೆಸಿದ ವ್ಯವಹಾರಗಳಲ್ಲಿಯೂ ಅವರು ರಾಜಿ ಮಾಡಿಕೊಂಡಿರಲಿಲ್ಲ ಎಂಬುದು ನಿಜ' ಎಂದು ಸತ್ಯಕಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸರ್ಕಾರಿ ದಾಖಲೆಗಳಲ್ಲಿ ಅರ್ಜಿಗಳು ಲಭ್ಯ:

ಸಾವರ್ಕರ್ ಸಲ್ಲಿಸಿದ್ದ 10 ಕ್ಷಮಾದಾನ ಅರ್ಜಿಗಳ ದಾಖಲೆಗಳು ಸರ್ಕಾರಿ ದಾಖಲೆಗಳಲ್ಲಿ ಲಭ್ಯವಿವೆ ಎಂದು ಸತ್ಯಕಿ ಹೇಳಿದ್ದಾರೆ.

'ಈ ಅರ್ಜಿಗಳನ್ನು ಜೈಲು ಆಡಳಿತವು ಬ್ರಿಟಿಷ್ ಸರ್ಕಾರಕ್ಕೆ ಕಳುಹಿಸುತ್ತಿತ್ತು. ಶಿಕ್ಷೆಯನ್ನು ಕಡಿಮೆ ಮಾಡುವ ಅಥವಾ ಬದಲಾಯಿಸುವ ಅಧಿಕಾರ ಬ್ರಿಟಿಷ್ ಸರ್ಕಾರಕ್ಕಿತ್ತು. ಆದರೆ ಅದು ಸರ್ಕಾರದ ನೀತಿ ಮತ್ತು ಕಾರ್ಯವಿಧಾನವನ್ನು ಅವಲಂಬಿಸಿತ್ತು. ಅರ್ಜಿಗಳು ಅಸ್ತಿತ್ವದಲ್ಲಿವೆ ಮತ್ತು ಸರ್ಕಾರಿ ದಾಖಲೆಗಳಲ್ಲಿ ಲಭ್ಯವಿವೆ' ಎಂದು ಅವರು ತಿಳಿಸಿದ್ದಾರೆ.

ಆದರೆ, ಅರ್ಜಿಗಳಲ್ಲಿನ ಭಾಷೆ ಬ್ರಿಟಿಷ್ ಆಡಳಿತದ ಮೇಲಿನ ನಿಷ್ಠೆಯನ್ನು ಸೂಚಿಸುವುದಿಲ್ಲ ಎಂದು ಅವರು ವಾದಿಸಿದ್ದಾರೆ.

ಎಲ್ಲ ಅರ್ಜಿಗಳೂ ತಿರಸ್ಕೃತ:

ಸಾವರ್ಕರ್ ಸಲ್ಲಿಸಿದ್ದ ಎಲ್ಲ ಕ್ಷಮಾದಾನ ಅರ್ಜಿಗಳನ್ನೂ ಬ್ರಿಟಿಷ್ ಸರ್ಕಾರ ತಿರಸ್ಕರಿಸಿತ್ತು ಎಂದು ಸತ್ಯಕಿ ಹೇಳಿದ್ದಾರೆ.

ಸಾವರ್ಕರ್ ಬಿಡುಗಡೆಯಾದರೆ ಅವರು ಮತ್ತೆ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿ ಬ್ರಿಟಿಷ್ ಆಳ್ವಿಕೆಗೆ ಸವಾಲಾಗಬಹುದು ಎಂಬ ಆತಂಕವನ್ನು ಅಧಿಕಾರಿಗಳು ತಮ್ಮ ಹಿಂಬರಹಗಳಲ್ಲಿ ವ್ಯಕ್ತಪಡಿಸಿದ್ದರು ಎಂದೂ ಅವರು ತಿಳಿಸಿದ್ದಾರೆ.

ಕ್ಷಮಾದಾನ ಅರ್ಜಿ ಸಾಮಾನ್ಯ ಪ್ರಕ್ರಿಯೆ:

'ಶಿಕ್ಷೆಯಲ್ಲಿ ಕಡಿತ ಪಡೆಯಲು ಕ್ಷಮಾದಾನ ಅರ್ಜಿ ಸಲ್ಲಿಸುವುದು ಬ್ರಿಟಿಷ್ ಆಡಳಿತದ ಕಾಲದಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿತ್ತು. ಸಾವರ್ಕರ್ ಮಾತ್ರವಲ್ಲದೆ ಇತರ ಕೈದಿಗಳೂ ಅರ್ಜಿಗಳನ್ನು ಸಲ್ಲಿಸಿದ್ದರು. ದಯಾ ಅರ್ಜಿ ಸಲ್ಲಿಸುವುದು ಅಸಾಧಾರಣ ಅಥವಾ ಕಾನೂನುಬಾಹಿರ ಕ್ರಮವಾಗಿರಲಿಲ್ಲ' ಎಂದು ಸತ್ಯಕಿ ಹೇಳಿದ್ದಾರೆ.

ಆದರೆ, ಅರ್ಜಿಗಳಲ್ಲಿನ ಭಾಷೆ ವಿನಮ್ರತೆಯನ್ನು ಅಥವಾ ಬ್ರಿಟಿಷ್ ಸರ್ಕಾರದ ಮೇಲಿನ ನಿಷ್ಠೆಯನ್ನು ವ್ಯಕ್ತಪಡಿಸುತ್ತದೆ ಎಂಬುದನ್ನು ಅವರು ತಳ್ಳಿಹಾಕಿದ್ದಾರೆ.

'ಅರ್ಜಿಗಳಲ್ಲಿ ಸಾವರ್ಕರ್ ತಮ್ಮ ಶಿಕ್ಷೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿರುವುದು ಮಾತ್ರ ನಿಜ' ಎಂದು ಹೇಳಿದ್ದಾರೆ.

'ಅಧಿಕೃತ ಶಿಷ್ಟಾಚಾರದ ಭಾಷೆ':

ಕ್ಷಮಾದಾನ ಅರ್ಜಿಗಳಲ್ಲಿ ಬಳಸಲಾದ ಭಾಷೆ ಅಧಿಕೃತ ಶಿಷ್ಟಾಚಾರದ ಭಾಗವಾಗಿತ್ತು ಎಂದು ಸತ್ಯಕಿ ಹೇಳಿದ್ದಾರೆ.

ಬ್ರಿಟಿಷರು ನಡೆಸಿದ ಅನ್ಯಾಯಗಳೇ ಕ್ರಾಂತಿಕಾರಿಗಳು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಕಾರಣವಾಗಿದ್ದವು. ಬ್ರಿಟಿಷರು ಮೊದಲೇ ಸುಧಾರಣೆಗಳನ್ನು ಜಾರಿಗೊಳಿಸಿದ್ದರೆ ಅವರು ಆ ಮಾರ್ಗವನ್ನು ಅನುಸರಿಸುವ ಅಗತ್ಯವೇ ಇರಲಿಲ್ಲ ಎಂಬ ಅಭಿಪ್ರಾಯವನ್ನು ಸಾವರ್ಕರ್ ವ್ಯಕ್ತಪಡಿಸಿದ್ದರು ಎಂದೂ ಅವರು ತಿಳಿಸಿದ್ದಾರೆ.

ಅರ್ಜಿಯ ಆಯ್ದ ಭಾಗ ದಾಖಲು:

ವಿಚಾರಣೆ ವೇಳೆ ಸಾವರ್ಕರ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯೊಂದರ ಆಯ್ದ ಭಾಗವನ್ನು ನ್ಯಾಯಾಲಯ ದಾಖಲಿಸಿತು.

ತನ್ನೊಂದಿಗೆ ಅಂಡಮಾನ್ ಜೈಲಿಗೆ ಕಳುಹಿಸಲ್ಪಟ್ಟ ಇತರರನ್ನು ಬಿಡುಗಡೆ ಮಾಡಲಾಗಿದ್ದರೂ, ತನ್ನನ್ನು ಮಾತ್ರ ಬಿಡುಗಡೆ ಮಾಡದೇ 'ಡಿ' ವರ್ಗದ ಕೈದಿಯಾಗಿ ವರ್ಗೀಕರಿಸಿ ಕಠಿಣ ಶಿಕ್ಷೆಗೆ ಒಳಪಡಿಸಲಾಗಿದೆ ಎಂದು ಆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

'ಪ್ರತಿ ಅರ್ಜಿಯ ಕೊನೆಯಲ್ಲಿ "Sir, I beg to remain, Your most obedient servant, V.D. Savarkar" ಎಂದು ಸಾವರ್ಕರ್ ಸಹಿ ಮಾಡಿದ್ದರು ಎಂಬುದು ನನಗೆ ತಿಳಿದಿಲ್ಲ' ಎಂದು ಸತ್ಯಕಿ ಹೇಳಿದ್ದಾರೆ.

'ಹತ್ತು ಅರ್ಜಿಗಳನ್ನು ಸಲ್ಲಿಸಿದ ನಂತರವೇ ಸಾವರ್ಕರ್ ಬಿಡುಗಡೆ ಪ್ರಕ್ರಿಯೆ ಆರಂಭವಾಯಿತು ಎನ್ನುವುದು ನಿಜವಲ್ಲ. ದಯಾ ಅರ್ಜಿ ಸಲ್ಲಿಸುವುದು ಶಿಕ್ಷೆಯಲ್ಲಿ ಕಡಿತ ಕೋರುವ ಅಧಿಕೃತ ವಿಧಾನವಾಗಿದ್ದು, ಸಾವರ್ಕರ್ ಅದನ್ನೇ ಬಳಸಿಕೊಂಡಿದ್ದರು' ಎಂದೂ ಅವರು ಹೇಳಿದ್ದಾರೆ.

ದಯಾ ಅರ್ಜಿಗಳ ಭಾಷೆ ಕೇವಲ ಔಪಚಾರಿಕವಾಗಿತ್ತು ಅಥವಾ ಅದು ಸಾವರ್ಕರ್ ಅವರ ಕಾರ್ಯತಂತ್ರದ ಭಾಗವಾಗಿತ್ತು ಎಂಬುದನ್ನು ಸಾಬೀತುಪಡಿಸುವ ಯಾವುದೇ ತಜ್ಞರ ವರದಿ ಲಭ್ಯವಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಕೈದಿಯ ವೈಯಕ್ತಿಕ ಆಯ್ಕೆ:

'ಯಾವುದೇ ಕೈದಿಯು ದಯಾ ಅರ್ಜಿ ಸಲ್ಲಿಸಲೇಬೇಕೆಂಬ ಬಾಧ್ಯತೆಯ ಅಡಿಯಲ್ಲಿ ಇರಲಿಲ್ಲ. ಅರ್ಜಿ ಸಲ್ಲಿಸಬೇಕೇ ಅಥವಾ ಬೇಡವೇ ಎಂಬುದು ಸಂಬಂಧಿತ ಕೈದಿಯ ವೈಯಕ್ತಿಕ ನಿರ್ಧಾರವಾಗಿತ್ತು' ಎಂದು ಸತ್ಯಕಿ ಹೇಳಿದ್ದಾರೆ.

'ಈ ಕ್ರಾಂತಿಕಾರಿಗಳು ಅಪಾರ ಕಷ್ಟಗಳನ್ನು ಅನುಭವಿಸಿದ್ದಾರೆ ಎಂಬುದು ನಿಜ. ಆದರೆ ದಯಾ ಅರ್ಜಿ ಸಲ್ಲಿಸಿದ್ದ ಇತರ ಕೈದಿಗಳ ಹೆಸರುಗಳು ನನಗೆ ತಿಳಿದಿಲ್ಲ' ಎಂದಿದ್ದಾರೆ.

ಸತ್ಯಕಿ ಸಾವರ್ಕರ್ ಅವರ ಅಡ್ಡ-ಸವಾಲು ಜುಲೈ 1ರಂದು ಮುಂದುವರಿಯಲಿದೆ.

ಪ್ರಕರಣದ ಹಿನ್ನೆಲೆ:

ಲಂಡನ್‌ನಲ್ಲಿ 2023ರ ಮಾರ್ಚ್ 5ರಂದು ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದಿಂದ ಸಾವರ್ಕರ್ ಅವರ ಮಾನಹಾನಿಯಾಗಿದೆ ಎಂದು ಆರೋಪಿಸಿ ಸತ್ಯಕಿ ಸಾವರ್ಕರ್ ಈ ಖಾಸಗಿ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿದ್ದಾರೆ.

ಸಾವರ್ಕರ್ ಅವರು ಮುಸ್ಲಿಂ ವ್ಯಕ್ತಿಯೊಬ್ಬರನ್ನು ಥಳಿಸಿದ ಘಟನೆಯನ್ನು ವಿವರಿಸುವ ಪುಸ್ತಕ ಬರೆದಿದ್ದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ ಅಂತಹ ಪುಸ್ತಕವನ್ನು ಸಾವರ್ಕರ್ ಬರೆದಿಲ್ಲ ಮತ್ತು ಅಂತಹ ಘಟನೆ ನಡೆದಿರುವುದಕ್ಕೂ ದಾಖಲೆಗಳಿಲ್ಲ ಎಂದು ಸತ್ಯಕಿ ದೂರಿನಲ್ಲಿ ತಿಳಿಸಿದ್ದಾರೆ.

ಭಾಷಣವನ್ನು ಇಂಗ್ಲೆಂಡ್‌ನಲ್ಲಿ ಮಾಡಲಾಗಿದ್ದರೂ, ಅದು ಭಾರತದಲ್ಲಿ ವ್ಯಾಪಕವಾಗಿ ವೈರಲ್ ಆದ ಕಾರಣ ಅದರ ಪರಿಣಾಮ ಪುಣೆಯಲ್ಲಿಯೂ ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಬೆಂಬಲಕ್ಕೆ ಹಲವು ಸುದ್ದಿ ವರದಿಗಳು ಮತ್ತು ರಾಹುಲ್ ಗಾಂಧಿಯವರ ಭಾಷಣದ ಯೂಟ್ಯೂಬ್ ಕೊಂಡಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500ರ ಅಡಿಯಲ್ಲಿ ರಾಹುಲ್ ಗಾಂಧಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಹಾಗೂ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 357ರ ಅಡಿಯಲ್ಲಿ ಗರಿಷ್ಠ ಪರಿಹಾರ ನೀಡುವಂತೆ ಸತ್ಯಕಿ ನ್ಯಾಯಾಲಯವನ್ನು ಕೋರಿದ್ದಾರೆ ಎಂದು  livelaw.in ವರದಿ ಮಾಡಿದೆ.











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries