ಹೈದರಾಬಾದ್: ನಗರದಲ್ಲಿರುವ ಅಮೆರಿಕ ದೂತಾವಾಸ ಕಚೇರಿ ಬಳಿಯಿರುವ ರಸ್ತೆಗೆ ಜೂನ್ 23ರಂದು 'ಡೊನಾಲ್ಡ್ ಟ್ರಂಪ್' ಅವರ ಹೆಸರನ್ನು ನಾಮಕರಣ ಮಾಡಲು ತೆಲಂಗಾಣ ಸರ್ಕಾರವು ಸಿದ್ಧತೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಇದಕ್ಕೆ, 'ಡೊನಾಲ್ಡ್ ಟ್ರಂಪ್ ಅವೆನ್ಯೂ' ಎಂದು ನಾಮಕರಣ ಮಾಡಲು 2025ರ ಡಿಸೆಂಬರ್‌ನಲ್ಲೇ ತೆಲಂಗಾಣ ಸರ್ಕಾರವು ತೀರ್ಮಾನಿಸಿತ್ತು.
ಪ್ರಾದೇಶಿಕ ರಿಂಗ್ ರಸ್ತೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ರೇಡಿಯಲ್ ರಸ್ತೆಗೆ ಉದ್ಯಮಿ ರತನ್ ಟಾಟಾ ಅವರ ಹೆಸರನ್ನು ಇಡಲಾಗುತ್ತದೆ ಎಂದು ಹೇಳಿದ್ದಾರೆ.
ಜಾಗತಿಕವಾಗಿ ಗೂಗಲ್ ಮತ್ತು ಗೂಗಲ್ ಮ್ಯಾಪ್‌ನ ಕೊಡುಗೆಯನ್ನು ಗುರುತಿಸುವ ಉದ್ದೇಶದಿಂದ ನಗರದಲ್ಲಿರುವ ಪ್ರಮುಖ ರಸ್ತೆಯೊಂದಕ್ಕೆ 'ಗೂಗಲ್ ಸ್ಟ್ರೀಟ್' ಎಂದು ನಾಮಕರಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೈದರಾಬಾದ್ ಅನ್ನು ನಾವೀನ್ಯತೆ-ಚಾಲಿತ ಅಭಿವೃದ್ಧಿ ಕೇಂದ್ರವಾಗಿಸುವ ಉದ್ದೇಶದಿಂದ ರೇವಂತ್ ರೆಡ್ಡಿ ಸರ್ಕಾರವು, ನಗರದ ಪ್ರಮುಖ ರಸ್ತೆಗಳಿಗೆ ಜಾಗತಿಕ ಪ್ರಸಿದ್ಧ ವ್ಯಕ್ತಿಗಳು ಮತ್ತು ಕಂಪನಿಗಳ ಹೆಸರನ್ನಿಡಲು ಮುಂದಾಗುತ್ತಿದೆ.

