ಕಾಸರಗೋಡು: ರಾಜ್ಯದಲ್ಲಿ ಅತೀವ ಹಿಂದುಳಿದಿರುವ ಜಿಲ್ಲೆಯಾದ ಕಾಸರಗೋಡಿಗೆ ಸವಾರ್ಂಗೀಣ ಅಭಿವೃದ್ಧಿಗಾಗಿ ರೂಪುನೀಡಲಾಗಿರುವ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ಗೆ ಈ ಹಿಂದೆ ಮಂಜೂರು ಮಾಡಲಾಗಿದ್ದ ಮೊತ್ತದಲ್ಲಿ, ಈಬಾರಿಯ ರಾಜ್ಯ ಬಜೆಟ್‍ನಲ್ಲಿ 11 ಕೋಟಿ ರೂ.ನಷ್ಟು ಕಡಿತ ಮಾಡಲಾಗಿದೆ.
ಈ ಹಿಂದಿನ ಸರ್ಕಾರ ಮಂಡಿಸಿದ 2026-27ನೇ ಆರ್ಥಿಕ ವರ್ಷದ ರಾಜ್ಯ ಬಜೆಟ್‍ನಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ಗಾಗಿ 78 ಕೋಟಿ ರೂ. ಮೀಸಲಿರಿಸಲಾಗಿದ್ದರೆ, ಈ ಬಾರಿ ಮುಖ್ಯಮಂತ್ರಿ ವಿ.ಡಿ ಸತೀಶನ್ ವಿಧಾನಸಭೆಯಲ್ಲಿ ಮಂಡಿಸಿರುವ ಬಜೆಟ್‍ನಲ್ಲಿ ಈ ಮೊತ್ತವನ್ನು 61 ಕೋಟಿ ರೂ.ಗಳಿಗೆ ಕಡಿತಗೊಳಿಸಲಾಗಿದೆ. 11 ಕೋಟಿ ರೂ.ಗಳಿಗೆ ಕಡಿತವುಂಟಾಗಿದೆ. ಅಂಗನವಾಡಿಗಳು ಮತ್ತು ಜಿಲ್ಲೆಯ ಶಾಲೆಗಳ ಅಭಿವೃದ್ಧಿ, ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ನಿರ್ಮಾಣ ಕೆಲಸ, ಪ್ರವಾಸೋದ್ಯಮ ಅಭಿವೃದ್ಧಿ ಇತ್ಯಾದಿ ಸೇರಿದಂತೆ ಒಟ್ಟು 100 ಕೋಟಿ ರೂ.ಗಳ ಯೋಜನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ಗೆ ಹಣ ಕಡಿತಗೊಳಿಸಿರುವ ಬಗ್ಗೆ ಕಾಸರಗೋಡಿನ ಜನತೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

