NEET-UG 2026 ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಜೂನ್ 22ರವರೆಗೆ ಟೆಲಿಗ್ರಾಮ್ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಮ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ತೇಜಸ್ ಕರಿಯಾ ನಡೆಸಿದರು.
ಕೇಂದ್ರ ಸರಕಾರ ಮತ್ತು ಟೆಲಿಗ್ರಾಮ್ ನ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ ಎಂದು livelaw.in ವರದಿ ಮಾಡಿದೆ.
'ಕೆಲವರು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂಬ ಕಾರಣಕ್ಕಾಗಿ 150 ಮಿಲಿಯನ್ ಬಳಕೆದಾರರ ಹಕ್ಕುಗಳನ್ನು ನಿರ್ಬಂಧಿಸುವುದು ಸಮರ್ಥನೀಯವೇ? ಒಂದು ವರ್ಗದ ಹಿತಾಸಕ್ತಿಯನ್ನು ರಕ್ಷಿಸುವ ನೆಪದಲ್ಲಿ ಇತರರ ಹಕ್ಕುಗಳಿಗೆ ನಿರ್ಬಂಧ ಹೇರಬಹುದೇ? ಈ ಪ್ರಕರಣದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮವು ಪರಿಸ್ಥಿತಿಗೆ ತಕ್ಕಂತಿದೆಯೇ?' ಎಂದು ನ್ಯಾಯಮೂರ್ತಿ ತೇಜಸ್ ಕರಿಯಾ ಪ್ರಶ್ನಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಟೆಲಿಗ್ರಾಮ್ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆಯೇ ಎಂಬುದನ್ನು ನ್ಯಾಯಾಲಯ ಪ್ರಶ್ನಿಸಿತು. ಅಪ್ಲಿಕೇಷನ್ ಅನ್ನು ಸಂಪೂರ್ಣವಾಗಿ ನಿರ್ಬಂಧಿಸದೆ, ಕಡಿಮೆ ನಿರ್ಬಂಧಿತ ಕ್ರಮಗಳ ಮೂಲಕವೇ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಿತ್ತೇ ಎಂಬ ಬಗ್ಗೆಯೂ ನ್ಯಾಯಮೂರ್ತಿ ಕರಿಯಾ ಟೆಲಿಗ್ರಾಮ್ ಪರ ವಕೀಲರನ್ನು ಪ್ರಶ್ನಿಸಿದರು.
ಟೆಲಿಗ್ರಾಮ್ ಪರವಾಗಿ ಹಾಜರಾದ ಹಿರಿಯ ವಕೀಲ ಧ್ರುವ್ ಮೆಹ್ತಾ, ಆಕ್ಷೇಪಾರ್ಹ ಪೋಸ್ಟ್ ಗಳನ್ನು ತೆಗೆದುಹಾಕುವ ಕ್ರಮವನ್ನು ಸರ್ಕಾರ ಕೈಗೊಳ್ಳಬಹುದು. ಆದರೆ ಇಡೀ ಅಪ್ಲಿಕೇಶನ್ ನಿರ್ಬಂಧಿಸುವುದು ಅಗತ್ಯಕ್ಕಿಂತ ಕಠಿಣ ಕ್ರಮವಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಕೇಂದ್ರ ಸರ್ಕಾರವು, ಟೆಲಿಗ್ರಾಮ್ ಇತರ ಸಾಮಾಜಿಕ ಮಾಧ್ಯಮ ಮತ್ತು ಮೆಸೆಜಿಂಗ್ ಅಪ್ಲಿಕೇಶನ್ ಗಳಿಗಿಂತ ಭಿನ್ನವಾದ ತಾಂತ್ರಿಕ ವ್ಯವಸ್ಥೆಯನ್ನು ಹೊಂದಿದೆ. ಇದರಿಂದ ವೇದಿಕೆಯಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವುದು, ಪತ್ತೆಹಚ್ಚುವುದು ಮತ್ತು ತನಿಖೆ ನಡೆಸುವುದು ಕಾನೂನು ಜಾರಿ ಸಂಸ್ಥೆಗಳಿಗೆ ಕಷ್ಟವಾಗುತ್ತದೆ ಎಂದು ತಿಳಿಸಿದೆ.
'ಟೆಲಿಗ್ರಾಮ್ ನಲ್ಲಿ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಚಾಟ್ ಬಾಟ್ ಗಳಿಗಾಗಿ ವಿಶೇಷ ವ್ಯವಸ್ಥೆ ಇದೆ. ಈ ಬಾಟ್ ಗಳು ಮಾನವ ಹಸ್ತಕ್ಷೇಪವಿಲ್ಲದೆ ಸಂದೇಶಗಳನ್ನು ಕಳಹಿಸುವುದು, ಬಳಕೆದಾರರನ್ನು ವಿವಿಧ ಚಾನಲ್ ಗಳಿಗೆ ಕಳುಹಿಸುವುದು, ದೊಡ್ಡ ಪ್ರಮಾಣದಲ್ಲಿ ಸಂದೇಶ ರವಾನಿಸುವುದು ಹಾಗೂ ಮಾಹಿತಿ ಸಂಗ್ರಹಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸಬಲ್ಲವು' ಎಂದು ಕೇಂದ್ರ ಸರ್ಕಾರ ಅಫಿಡವಿಟ್ ನಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಟೆಲಿಗ್ರಾಮ್ ನ ವಿನ್ಯಾಸ ಇತರ ಅಪ್ಲಿಕೇಷನ್ ಗಳಿಗಿಂತ ಭಿನ್ನವಾಗಿದ್ದು, ಕಾನೂನು ಜಾರಿ ಸಂಸ್ಥೆಗಳಿಗೆ ತನಿಖೆ ನಡೆಸುವುದನ್ನು ಹೆಚ್ಚು ಕಷ್ಟಕರವಾಗಿಸುತ್ತದೆ ಎಂದು ವಾದಿಸಿದರು.
ಇದೇ ವೇಳೆ, ಟೆಲಿಗ್ರಾಮ್ ನಲ್ಲಿ ಬಳಕೆದಾರರ ಗುರುತನ್ನು ಮರೆಮಾಡಲು ನೆರವಾಗುವ ಫೋನ್ ಸಂಖ್ಯೆ ಗೌಪ್ಯತೆ ವ್ಯವಸ್ಥೆ, ವರ್ಚುವಲ್ ಫೋನ್ ಸಂಖ್ಯೆಗಳು ಮತ್ತು VPN ಸೇವೆಗಳ ಬಳಕೆಯನ್ನು ತುಷಾರ್ ಮೆಹ್ತಾ ಉಲ್ಲೇಖಿಸಿದರು. ಇಂತಹ ಸೌಲಭ್ಯಗಳಿಂದ ಪ್ರಕರಣದ ತನಿಖೆ ವೇಳೆ ಸಂಬಂಧಪಟ್ಟವರನ್ನು ಗುರುತಿಸುವುದು, ಅವರ ನಡುವಿನ ಸಂಪರ್ಕಗಳನ್ನು ಪತ್ತೆಹಚ್ಚುವುದು ಹಾಗೂ ಸಂಚಿನಲ್ಲಿ ಭಾಗಿಯಾಗಿರುವವರ ಬಗ್ಗೆ ಮಾಹಿತಿ ಸಂಗ್ರಹಿಸುವುದು ಕಾನೂನು ಜಾರಿ ಸಂಸ್ಥೆಗಳಿಗೆ ಕಷ್ಟವಾಗುತ್ತದೆ ಎಂದು ಅವರು ವಾದಿಸಿದರು.
NEET-UG 2026 ಮರುಪರೀಕ್ಷೆ ಜೂ.21ರಂದು ನಡೆಯಲಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಟೆಲಿಗ್ರಾಮ್ ಅಪ್ಲಿಕೇಷನ್ ಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 69ಎ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಧಿಸೂಚನೆಗಳನ್ನು ಹೊರಡಿಸಿ ಟೆಲಿಗ್ರಾಮ್ ಬಳಕೆ ನಿರ್ಬಂಧಿಸಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ.

