ನವದೆಹಲಿ: ಮುಂಗಾರು ಮಳೆ ಕೊರತೆಯಿಂದ ಭಾರತದ ಬಹುತೇಕ ಜಲಾಶಯಗಳಲ್ಲಿ ನೀರಿನ ಕೊರತೆ ಇರುವುದು ಕಂಡು ಬಂದಿದೆ.
ದೇಶದ 166 ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯದಲ್ಲಿ ಶೇ 28.28ರಷ್ಟು ಮಾತ್ರ ನೀರು ಸಂಗ್ರಹವಾಗಿದೆ ಎಂದು ಕೇಂದ್ರ ಜಲ ಆಯೋಗ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಮುಂಗಾರು ಹಂಗಾಮು ಆರಂಭಗೊಂಡ ನಂತರ ಜಲಾಶಗಳಲ್ಲಿನ ನೀರಿನ ಮಟ್ಟವು ಶೇ 15.8ರಷ್ಟು ಸಾಮಾನ್ಯ ಮಟ್ಟಕಿಂತ ಅಧಿಕವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 23.8ರಷ್ಟು ನೀರಿನ ಸಂಗ್ರಹವಿತ್ತು. ಆದರೆ, ಮಳೆ ಕೊರತೆಯಿಂದ ಶೇ 8.17 ರಷ್ಟು ನೀರಿನ ಸಂಗ್ರಹ ಹಿಂದಿನ ವರ್ಷಕ್ಕಿಂತ ಕಡಿಮೆ ಇದೆ ಎಂದು ಆಯೋಗ ತಿಳಿಸಿದೆ.
ಪೂರ್ವ ಭಾರತದ ಜಲಾಶಯಗಳಲ್ಲಿನ ನೀರಿನ ಮಟ್ಟವು ಸಾಮಾನ್ಯ ಮಟಕ್ಕಿಂತ ಕುಸಿದಿದ್ದು. ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ. ಮಳೆ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡು ಬಂದಿರುವುದೇ ಇದಕ್ಕೆ ಮುಖ್ಯ ಕಾರಣ.
ಅದೇ ದಕ್ಷಿಣ ಭಾರತದ ಜಲಾಶಯಗಳಲ್ಲಿನ ಪರಿಸ್ಥಿತಿ ಕೊಂಚ ಉತ್ತಮ. ಜಲಾಶಯಗಳಲ್ಲಿ ಶೇ 20.98ರಷ್ಟು ನೀರು ಸಂಗ್ರಹವಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ನೀರಿನ ಪ್ರಮಾಣ ಕೊಂಚ ಕಡಿಮೆಯಿದೆ.
ಚಂದನ್ ಜಲಾಶಯ, ಭೀಮಾ ಉಜನಿ, ಮೌದಾ, ನಾನಕ್ ಸಾಗರ್ ಜಲಾಶಯದ ನೀರಿನ ಮಟ್ಟದ ಬಹುತೇಕ ಶೂನ್ಯಕ್ಕೆ ಹತ್ತಿರವಾಗಿದ್ದು, ಆ ಭಾಗದಲ್ಲಿ ಆತಂಕ ಸೃಷ್ಟಿಸಿದೆ.
ಮಳೆ ನಿಗದಿಯಾಗದಂತೆ ಆಗದೇ ಇದ್ದರೆ ಮುಂದೆ ಕೃಷಿ ಮಾತ್ರವಲ್ಲದೇ ಕುಡಿಯುವ ನೀರು, ಜಲವಿದ್ಯುತ್ ಯೋಜನೆಗಳಿಗೂ ತೊಂದರೆಯಾಗಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ 166 ಪ್ರಮುಖ ಜಲಾಶಯಗಳ ನಿರ್ವಹಣೆಯನ್ನು ಕೇಂದ್ರ ಜಲ ಆಯೋಗವು ಮಾಡುತ್ತಿದೆ. ಈ ವರ್ಷದ ಜೂನ್ 11ರ ಹೊತ್ತಿಗೆ 51.92 ಬಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಿತ್ತು. ಈ ಸಮಯಕ್ಕೆ ಎಲ್ಲಾ ಜಲಾಶಯಗಳ ನೀರಿನ ಸಂಗ್ರಹ ಪ್ರಮಾಣ 183.56 ಬಿಲಿಯನ್ ಕ್ಯುಬಿಕ್ ಮೀಟರ್ ನಷ್ಟು ಇರಬೇಕಿತ್ತು.
ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಲ್ಲಿನ 47 ಜಲಾಶಯಗಳನ್ನು ಆಯೋಗ ನಿರ್ವಹಣೆ ಮಾಡುತ್ತಿದೆ. ಈ ಜಲಾಶಯಗಳಲ್ಲಿ 55.29 ಬಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗಬೇಕಾಗಿತ್ತಾದರೂ ಇರುವುದು 11.60 ಬಿಲಿಯನ್ ಕ್ಯುಬಿಕ್ ಮೀಟರ್ ನೀರು ಮಾತ್ರ. ಅಂದರೆ ಬರೀ ಶೇ 20.98 ರಷ್ಟು ನೀರು ಮಾತ್ರ ಸಂಗ್ರಹವಿದೆ. ಈ ರಾಜ್ಯಗಳ ಜಲಾಶಯಗಳ ಭಾಗದಲ್ಲಿ ನೀರಿನ ಕೊರತೆ ಇದ್ದು, ಒತ್ತಡವಂತೂ ಇದೆ ಎಂದು ಆಯೋಗ ಹೇಳಿದೆ.
ಜೂನ್ 21 ರ ನಂತರ ವಾತಾವರಣದಲ್ಲಿ ತೇವಾಂಶದ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಜೂನ್ ಕೊನೆಯ ವಾರದ ವೇಳೆಗೆ ಮುಂಗಾರು ಮತ್ತೆ ವೇಗ ಪಡೆದುಕೊಂಡು ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಿ ಕೃಷಿ ಚಟುವಟಿಕೆಗಳಿಗೆ ಜೀವ ತುಂಬಬಹುದು ಎಂದು ಹವಾಮಾನ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

