ನವದೆಹಲಿ: ಪರೀಕ್ಷಾ ಅಕ್ರಮ ಹಾಗೂ ವಿವಾದಗಳಿಂದಾಗಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಕುಟುಂಬಗಳಿಗೆ ₹1 ಕೋಟಿ ಪರಿಹಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಒತ್ತಾಯಿಸಿದ್ದಾರೆ.
ಅಲ್ಲದೆ ಈ ಎಲ್ಲ ಹೊಣೆಗಾರಿಕೆಯನ್ನು ಹೊತ್ತುಕೊಂಡು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಪತ್ರ ಬರೆದಿದ್ದಾರೆ.
ಜೂನ್ 20ರಂದು ಜಂತರ್ ಮಂತರ್‌ನಲ್ಲಿ ಸಿಜೆಪಿಯಿಂದ ಎರಡನೇ ಸಲ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪರೀಕ್ಷಾ ಅಕ್ರಮ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ಅಭಿಯಾನ ತೀವ್ರಗೊಳಿಸಲು ನಿರ್ಧರಿಸಲಾಗಿದೆ.
'ನಮ್ಮ ದೇಶದ ಭವಿಷ್ಯಕ್ಕಾಗಿ ಯುವ ವಿದ್ಯಾರ್ಥಿಗಳ ಜೀವನ ಹಾಗೂ ಮಾನಸಿಕ ಯೋಗಕ್ಷೇಮಕ್ಕೆ ಬೆದರಿಕೆಯಾಗಿರುವ ಬಿಕ್ಕಿಟ್ಟಿನ ಬಗ್ಗೆ ತುರ್ತು ಗಮನ ಸೆಳೆಯಲು ಭಾರವಾದ ಮನಸ್ಸಿನಿಂದ ನಿಮಗೆ ಪತ್ರ ಬರೆಯುತ್ತಿದ್ದೇನೆ' ಎಂದು ದೀಪ್ಕೆ ತಿಳಿಸಿದ್ದಾರೆ.
'ಕಳೆದ ಕೆಲವು ವಾರಗಳಲ್ಲಿ 11 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 48 ತಾಸಿನಲ್ಲಿ ಐದು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಆರ್ಥಿಕ ನೆರವು ನೀಡಬೇಕು. ₹1 ಕೋಟಿ ಪರಿಹಾರ ಪ್ಯಾಕೇಜ್ ಒದಗಿಸಬೇಕು' ಎಂದು ಒತ್ತಾಯಿಸಿದ್ದಾರೆ.

