ನವದೆಹಲಿ: ನೀಟ್-ಯುಜಿ 2026ರ ಮರುಪರೀಕ್ಷೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಅರ್ಜಿಗಳ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ನ್ಯಾಯಮೂರ್ತಿ ಪಿ.ಎಸ್.ನರಸಿಂಹ ನೇತೃತ್ವದ ಪೀಠವು ಜುಲೈನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನಡೆಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ವಿ. ಮೋಹನ್ ಅವರಿದ್ದ ಪೀಠ ತಿಳಿಸಿದೆ.
'ನೀಟ್‌ಗೆ ಸಂಬಂಧಿಸಿದ ಎಲ್ಲ ವಿಷಯಗಳು ನರಸಿಂಹ ನೇತೃತ್ವದ ಪೀಠದ ಮುಂದೆ ಹೋಗುತ್ತವೆ' ಎಂದು ಸಿಜೆಐ ಉಲ್ಲೇಖಿಸಿದ್ದಾರೆ.
ಮೇ 3ರಂದು 'ನೀಟ್-ಯುಜಿ' ಪರೀಕ್ಷೆ ನಡೆದಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದ ಕಾರಣ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು(ಎನ್‌ಟಿಎ) ಈ ಪರೀಕ್ಷೆಯನ್ನು ಮೇ 12ರಂದು ರದ್ದುಗೊಳಿಸಿತ್ತು.
ಇದೀಗ ಮರುಪರೀಕ್ಷೆಯು ಜೂನ್ 21ರಂದು ನಡೆಯಲಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕುರಿತಂತೆ ಸಿಬಿಐ ತನಿಖೆ ನಡೆಸುತ್ತಿದೆ.

