ನವದೆಹಲಿ: ಕೇಂದ್ರ ಸರ್ಕಾರವು ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ವರ್ಷದಲ್ಲಿ ಮೂರು ಕಂತಿನಲ್ಲಿ ನೀಡುವ ಪಿಎಂ ಕಿಸಾನ್ ಯೋಜನೆಯ 23ನೇ ಕಂತು ಜೂನ್ 20ರಂದು ಜಮೆಯಾಗಲಿದೆ.
ಯೋಜನೆ ಅಡಿಯಲ್ಲಿ ದೇಶಾದ್ಯಂತ 9.44 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಸುಮಾರು ₹18,880 ಕೋಟಿ ತಲುಪಲಿದೆ ಎಂದು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ 'ವಿಕಸಿತ ಭಾರತ, ವಿಕಸಿತ ಪಶ್ಚಿಮ ಬಂಗಾಳ'ದ ಸಂಕಲ್ಪಕ್ಕೆ ಹೊಸ ವೇಗವನ್ನು ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೂನ್ 20 ರಂದು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಿಂದ ಕೃಷಿ, ಗ್ರಾಮೀಣ ಅಭಿವೃದ್ಧಿ, ಮೀನುಗಾರಿಕೆ ಮತ್ತು ರೈಲ್ವೆ ಸೇರಿದಂತೆ ವಿವಿಧ ವಲಯಗಳ ಹಲವು ಪ್ರಮುಖ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 23ನೇ ಕಂತನ್ನು ಬಿಡುಗಡೆ ಮಾಡುವರು ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ, ಡಿಜಿಟಲ್ ಕೃಷಿ ಮಿಷನ್ ಅಡಿಯಲ್ಲಿ ಅಗ್ರಿಟೆಕ್ ಪ್ಲಾಟ್‌ಫಾರ್ಮ್, ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಮತ್ತು ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯಂತಹ ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇವು ರೈತರ ಆದಾಯ, ಗ್ರಾಮೀಣ ಮೂಲಸೌಕರ್ಯ ಮತ್ತು ಸಮಗ್ರ ಅಭಿವೃದ್ಧಿಗೆ ವ್ಯಾಪಕ ಶಕ್ತಿಯನ್ನು ನೀಡಲಿವೆ ಎಂದು ಶಿವರಾಜ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯವೊಂದಕ್ಕೆ ಪಿಎಂ-ಕಿಸಾನ್ ಯೋಜನೆಯಡಿ ವಿತರಿಸಲಾದ ಮೊತ್ತವು ₹15,055 ಕೋಟಿ ದಾಟಲಿದ್ದು, 2019 ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ದೇಶಾದ್ಯಂತ ವಿತರಿಸಲಾದ ಒಟ್ಟು ಮೊತ್ತವು ₹4.46 ಲಕ್ಷ ಕೋಟಿಗೂ ಅಧಿಕವಾಗಲಿದೆ.
ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಒಟ್ಟು ವೆಚ್ಚ ಸುಮಾರು ₹12,200 ಕೋಟಿಯಾಗಿದೆ 2026-27ರ ಹಣಕಾಸು ವರ್ಷದಲ್ಲಿ, ಈ ಯೋಜನೆಗಳ ಅಡಿಯಲ್ಲಿ 30 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಸುಮಾರು 1.10 ಕೋಟಿ ರೈತರಿಗೆ ಬೆಳೆ ವಿಮೆ ರಕ್ಷಣೆ ನೀಡುವ ಗುರಿಯನ್ನು ಹೊಂದಲಾಗಿದೆ.ಇದರ ಅಡಿಯಲ್ಲಿ ಸುಮಾರು ₹₹28,140 ಕೋಟಿ ಮೌಲ್ಯದ ಬೆಳೆಗಳು ವಿಮಾ ರಕ್ಷಣೆಯ ವ್ಯಾಪ್ತಿಗೆ ಬರಲಿವೆ ಎಂದು ತಿಳಿಸಿದ್ದಾರೆ.
ಡಿಜಿಟಲ್ ಕೃಷಿ ಮಿಷನ್ ಅಡಿಯಲ್ಲಿ 'ಅಗ್ರಿಟೆಕ್' ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಲಿದ್ದಾರೆ. ಇದು ರಸಗೊಬ್ಬರ ವಿತರಣೆ, ಕಿಸಾನ್ ಕ್ರೆಡಿಟ್ ಕಾರ್ಡ್, ನೇರ ನಗದು ವರ್ಗಾವಣೆ ಮತ್ತು ಕನಿಷ್ಠ ಬೆಂಬಲ ಬೆಲೆ ಆಧಾರಿತ ಸರ್ಕಾರಿ ಖರೀದಿಯಂತಹ ಸೇವೆಗಳಿಗಾಗಿ ಒಂದು ಸಮಗ್ರ ಡಿಜಿಟಲ್ ವೇದಿಕೆಯನ್ನು ಒದಗಿಸಲಿದೆ. ಇದು ರೈತರಿಗೆ ಸಕಾಲಿಕ ಮಾಹಿತಿ, ಪಾರದರ್ಶಕ ಸೇವೆಗಳು ಮತ್ತು ಉತ್ತಮ ಮಾರುಕಟ್ಟೆ ಅವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಬಂಪರ್
ಇತ್ತೀಚಿಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸಿದ ನಂತರ ಪಶ್ಚಿಮ ಬಂಗಾಲಕ್ಕೆ ಕೇಂದ್ರ ಸರ್ಕಾರ ಭಾರೀ ಕೊಡುಗೆಯನ್ನೇ ನೀಡುತ್ತಿದೆ. ಕೃಷಿ, ಗ್ರಾಮೀಣಾಭಿವೃದ್ದಿಗೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡುವರು.
ಅನುಮೋದಿತ ಕ್ರಿಯಾ ಯೋಜನೆಯ ಪ್ರಕಾರ, 2026-27ರ ಹಣಕಾಸು ವರ್ಷದಲ್ಲಿ ರಾಜ್ಯದ 17,300 ಹೆಕ್ಟೇರ್ ಪ್ರದೇಶದಲ್ಲಿ 346 ನೈಸರ್ಗಿಕ ಕೃಷಿ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುವ 'ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್' ಅನ್ನು ಪ್ರಧಾನಮಂತ್ರಿ ಪ್ರಾರಂಭಿಸಲಿದ್ದಾರೆ. ಈ ಕ್ಲಸ್ಟರ್ ಗಳು ಜೈವಿಕ ಆಧಾರಿತ ಪರಿಕರಗಳು, ತರಬೇತಿ ಮತ್ತು ಉತ್ತಮ ಮಾರುಕಟ್ಟೆ ಸಂಪರ್ಕದೊಂದಿಗೆ 43,250 ರೈತರಿಗೆ ಪ್ರಯೋಜನ ನೀಡಲಿವೆ.
ಇದರೊಂದಿಗೆ, 'ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ'ಯನ್ನು ಪ್ರಾರಂಭಿಸಲಿದ್ದಾರೆ, ಇದನ್ನು ಪುರುಲಿಯಾ, ಡಾರ್ಜಿಲಿಂಗ್, ಅಲಿಪುರ್ದುವಾರ್ ಮತ್ತು ಝರ್ಗ್ರಾಮ್ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಕೃಷಿ ಉತ್ಪಾದಕತೆ ಹೆಚ್ಚಿಸುವುದು, ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸುವುದು, ದಾಸ್ತಾನು ಮತ್ತು ಸಂಸ್ಕರಣೆಯಂತಹ ಕೊಯ್ಲಿನ-ನಂತರದ ಮೂಲಸೌಕರ್ಯ ಬಲಪಡಿಸಿ ರೈತರು, ಗ್ರಾಮೀಣ ಯುವಕರಿಗೆ ಹೊಸ ಉದ್ಯೋಗ ಮತ್ತು ಉದ್ಯಮಶೀಲತೆ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಚೌಹಾಣ್ ತಿಳಿಸಿದ್ದಾರೆ.

