ಅಪಘಾತಕ್ಕೊಳಗಾದವರನ್ನು ಸಕಾಲದಲ್ಲಿ ಆಸ್ಪತ್ರೆಗೆ ತಲುಪಿಸುವ ಅಥವಾ ನೆರವು ನೀಡುವವರಿಗೆ ಈ ಯೋಜನೆಯಡಿ ಕಾನೂನು ರಕ್ಷಣೆ ಮಾತ್ರವಲ್ಲದೆ, ₹25,000 ನಗದು ಬಹುಮಾನವನ್ನೂ ನೀಡಲಾಗುತ್ತದೆ.
'ಗೋಲ್ಡನ್ ಅವರ್' ಎಂದರೇನು?
ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆಯನ್ನು 'ಗೋಲ್ಡನ್ ಅವರ್' (Golden Hour) ಎನ್ನಲಾಗುತ್ತದೆ. ಈ ಸಮಯದಲ್ಲಿ ಗಾಯಾಳುವಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆತರೆ ಸಾವು, ದೀರ್ಘಕಾಲದ ಅಂಗವೈಕಲ್ಯ ಅಥವಾ ತೀವ್ರ ಮಾನಸಿಕ ಆಘಾತದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು
ರಹಾ-ವೀರ್ ಆಗಲು ಯಾವುದೇ ವೈದ್ಯಕೀಯ ತರಬೇತಿ ಅಥವಾ ವಿಶೇಷ ಉಪಕರಣಗಳ ಅಗತ್ಯವಿಲ್ಲ. ಗಾಯಗೊಂಡವರನ್ನು ಆದಷ್ಟು ಬೇಗ ಆಸ್ಪತ್ರೆಗೆ ತಲುಪಿಸಿದರೆ ಸಾಕು.ಯಾರು ರಹಾ-ವೀರ್ ಆಗಬಹುದು?:ಏನು ಮಾಡಬೇಕು?
ಭಯವಿಲ್ಲದೆ ಸಹಾಯ ಮಾಡಿ: ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡುವ ನಿಮಗೆ (ರಹಾ-ವೀರ್) ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಹೊಣೆಗಾರಿಕೆಯಿಂದ ಕಾನೂನು ರಕ್ಷಣೆ ಇರುತ್ತದೆ.
ನಿಮ್ಮ ಹೆಸರನ್ನು ಗೋಪ್ಯವಾಗಿಡಬಹುದು: ನೀವು ಸಾಕ್ಷಿಯಾಗಲು ಇಷ್ಟಪಡದಿದ್ದರೆ, ನಿಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲ.
ಒಂದೇ ಒಂದು ಪೊಲೀಸ್ ಹೇಳಿಕೆ: ನೀವು ಸಾಕ್ಷಿಯಾಗಲು ಒಪ್ಪಿಕೊಂಡರೆ, ನಿಮಗೆ ಅನುಕೂಲಕರವಾದ ಸಮಯ ಮತ್ತು ಸ್ಥಳದಲ್ಲಿ ಕೇವಲ ಒಂದು ಬಾರಿ ಮಾತ್ರ ಹೇಳಿಕೆ ನೀಡಬಹುದು.
ಆಸ್ಪತ್ರೆಯ ರಶೀದಿ ಪಡೆಯಿರಿ: ನೀವು ಗಾಯಾಳುವನ್ನು ಆಸ್ಪತ್ರೆಗೆ ಕರೆತಂದಿದ್ದೀರಿ ಎಂಬುದಕ್ಕೆ ಆಸ್ಪತ್ರೆಯಿಂದ ಒಂದು ಸರಳ ದೃಢೀಕರಣ ಪತ್ರವನ್ನು ಕೇಳಿ ಪಡೆಯುವ ಹಕ್ಕು ನಿಮಗಿದೆ.
ಏನು ಮಾಡಬಾರದು?
ಕಾನೂನಿನ ಸಮಸ್ಯೆಗಳಾಗಬಹುದು ಎಂದು ಹಿಂಜರಿಯಬೇಡಿ.
ಆಸ್ಪತ್ರೆಯಲ್ಲಿಯೇ ಇರಬೇಕಾದ ಅಗತ್ಯವಿಲ್ಲ: ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಅಲ್ಲಿಯೇ ಇರಬೇಕಾದ ಅಗತ್ಯವಿಲ್ಲ. ತಕ್ಷಣ ನೀವು ಅಲ್ಲಿಂದ ಹೊರಡಬಹುದು
ಹಣ ಪಾವತಿಸಬೇಕಾಗಿಲ್ಲ: ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಯವರು ನಿಮ್ಮ ಬಳಿ ಹಣ ಕೇಳುವಂತಿಲ್ಲ.
ಎಫ್‌ಐಆರ್ ದಾಖಲಿಸಲು ಬಲವಂತ ಮಾಡುವಂತಿಲ್ಲ: ಸಾಕ್ಷ್ಯ ಅಥವಾ ದೂರು ನೀಡಲು ಯಾರೂ ನಿಮ್ಮನ್ನು ಬಲವಂತ ಮಾಡುವಂತಿಲ್ಲ.
ಯೋಜನೆಯ ಮುಖ್ಯ ಉದ್ದೇಶ?
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನೀಡಿದ ಮಾಹಿತಿಯ ಪ್ರಕಾರ, ರಸ್ತೆ ಅಪಘಾತಗಳಿಂದಾಗಿ ದೇಶದ ಜಿಡಿಪಿಯ (GDP) ಸುಮಾರು ಶೇ 3ರಷ್ಟು ನಷ್ಟವಾಗುತ್ತಿದೆ. ಅಪಘಾತ ನಡೆದಾಗ ಪೊಲೀಸ್ ಕಿರಿಕಿರಿ, ಕೋರ್ಟ್-ಕಚೇರಿ ಅಲೆದಾಟ ಮತ್ತು ಆಸ್ಪತ್ರೆಯ ಖರ್ಚು ಮತ್ತು ಕಾನೂನು ಪ್ರಕ್ರಿಯೆಗೆ ಹೆದರಿ ಜನ ಸಹಾಯ ಮಾಡಲು ಮುಂದೆ ಬರುತ್ತಿರಲಿಲ್ಲ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅನೇಕರು ಸಾವಿಗೀಡಾಗುತ್ತಿದ್ದಾರೆ. ಈ ಭಯವನ್ನು ಹೋಗಲಾಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ಬಹುಮಾನದ ವಿವರ:
ಸಕಾಲದಲ್ಲಿ ಸಹಾಯ ಮಾಡುವುದನ್ನು ಉತ್ತೇಜಿಸಲು, ಗೋಲ್ಡನ್ ಅವರ್‌ನಲ್ಲಿ ಗಾಯಾಳುಗಳಿಗೆ ವೈದ್ಯಕೀಯ ನೆರವು ಸಿಗುವಂತೆ ಮಾಡುವ ವ್ಯಕ್ತಿಗಳಿಗೆ ₹25,000 ನಗದು ಮತ್ತು ಪ್ರಶಂಸಾ ಪತ್ರ ನೀಡಲಾಗುತ್ತದೆ. ಒಬ್ಬ ವ್ಯಕ್ತಿಯು ವರ್ಷದಲ್ಲಿ ಗರಿಷ್ಠ 5 ಬಾರಿ ಇಂತಹ ಸಹಾಯಕ್ಕಾಗಿ ಬಹುಮಾನವನ್ನು ಪಡೆಯಬಹುದು.
ಅಪಘಾತಕ್ಕೊಳಗಾದವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂಬ ಸಂಸ್ಕೃತಿಯನ್ನು ಬೆಳೆಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಆಧಾರ: ಇಂಡಿಯಾ ಟುಡೇ

