ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧಪಕ್ಷದ ನಾಯಕನ ಆಯ್ಕೆಗಾಗಿ ಒಂದೇ ಪಕ್ಷದಿಂದ ಎರಡು ಪ್ರಸ್ತಾವಗಳು ಸಲ್ಲಿಕೆಯಾಗಿದ್ದಾಗ ಸ್ಪೀಕರ್ ಕೈಗೊಳ್ಳಬೇಕಾಗಿದ್ದ ಕ್ರಮಗಳೇನು ಎಂದು ಕಲ್ಕತ್ತ ಹೈಕೋರ್ಟ್ ಮಂಗಳವಾರ ಪ್ರಶ್ನಿಸಿದೆ.
ತನ್ನ ಹೆಸರನ್ನು ತಿರಸ್ಕರಿಸಿರುವುದನ್ನು ಮತ್ತು ಇನ್ನೊಂದು ಬಣದ ಶಾಸಕ ರುತಬ್ರತಾ ಬ್ಯಾನರ್ಜಿ ಅವರನ್ನು ವಿರೋಧಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಟಿಎಂಸಿ ಶಾಸಕ ಶೋಭನ್‌ದೇಬ್ ಚಟ್ಟೋಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು.
'ಅತೀ ಹೆಚ್ಚು ಸದಸ್ಯರಿರುವ ವಿರೋಧ ಪಕ್ಷದ ನಿರ್ಣಯದ ಆಧಾರದಲ್ಲಿ ಸ್ಪೀಕರ್ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಇಂಥ ಪ್ರಸ್ತಾವಗಳಿಂದ ಉಂಟಾಗುವ ವಿವಾದಗಳನ್ನು ಕಾನೂನಿನ ಮೂಲಕ ಪರಿಹರಿಸಬೇಕಾಗುತ್ತದೆ' ಎಂದು ನ್ಯಾಯಮೂರ್ತಿ ಕೃಷ್ಣ ರಾವ್ ಅವರು ಹೇಳಿದರು.
'ಒಂದೇ ಪಕ್ಷದಿಂದ ಎರಡು ಪ್ರಸ್ತಾವಗಳು ಸಲ್ಲಿಕೆಯಾದಾಗ ಸ್ಪೀಕರ್ ಅವರ ಕರ್ತವ್ಯವೇನು? ಅವರು ಸ್ವಯಂಪ್ರೇರಿತವಾಗಿ ನಿರ್ಧಾರ ಕೈಗೊಳ್ಳಬಹುದೇ ಅಥವಾ ಎರಡು ಬಣಗಳು ವಾದ ಮಂಡಿಸಲು ಅವಕಾಶ ನೀಡಬೇಕೇ' ಎಂದು ನ್ಯಾಯಾಲಯ ಪ್ರಶ್ನಿಸಿತು.
'ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರುತಬ್ರತಾ ಬ್ಯಾನರ್ಜಿ ಹೆಸರನ್ನು ಯಾರು ಪ್ರಸ್ತಾಪಿಸಿದರು. ಪಸ್ತಾವ ಸಲ್ಲಿಸಲು ರಾಜಕೀಯ ಪಕ್ಷ ಬೇಕಲ್ಲವೇ?' ಎಂದು ಕೇಳಿತು.
'ಸದನದ ಮುಂದೆ ಪ್ರಸ್ತಾಪಿಸದೆ ಮತ್ತು ಬಹುಮತ ಸಾಬೀತಿಗೆ ಅವಕಾಶ ನೀಡದೆ ಸ್ಪೀಕರ್ ಹೇಗೆ ನಿರ್ಣಯ ಕೈಗೊಳ್ಳುತ್ತಾರೆ' ಎಂದು ನ್ಯಾಯಪೀಠ ಪ್ರಶ್ನಿಸಿತು.
ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.

