ಜೈಪುರ: 'ಕಾಂಗ್ರೆಸ್‌ನ 'ಮೃದು ಧೋರಣೆ'ಯಿಂದಾಗಿಯೇ ಆರ್‌ಎಸ್‌ಎಸ್ ಈ ಮಟ್ಟಕ್ಕೆ ಬೆಳೆದಿದ್ದು, 100 ವರ್ಷ ಪೂರೈಸಿದೆ. ಈ ಕಾರಣಕ್ಕೆ ಅದು ಪಕ್ಷಕ್ಕೆ ಋಣಿಯಾಗಿರಬೇಕು' ಎಂದು ಕಾಂಗ್ರೆಸ್ ಮುಖಂಡ ಹಾಗೂ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಮಂಗಳವಾರ ಹೇಳಿದ್ದಾರೆ.
'ಬಿಜೆಪಿ-ಆರ್‌ಎಸ್‌ಎಸ್ ಆಡಳಿತದ ಅವಧಿಯಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿದೆ. ಈ ಕುರಿತು ಔಪಚಾರಿಕ ಘೋಷಣೆಯಷ್ಟೆ ಬಾಕಿ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈಗ ಬಿಜೆಪಿ ಮಾಡುತ್ತಿರುವಂತೆ ಕಾಂಗ್ರೆಸ್ ಪಕ್ಷವು ತನ್ನ ಅಧಿಕಾರದ ಅವಧಿಯಲ್ಲಿ ದ್ವೇಷ ಸಾಧಿಸಿದ್ದರೆ ಆರ್‌ಎಸ್‌ಎಸ್ ಅಥವಾ ಬಿಜೆಪಿ ಈ ಮಟ್ಟಿಗೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ಅವು ಕಾಂಗ್ರೆಸ್‌ಗೆ ಧನ್ಯವಾದ ಹೇಳಬೇಕು' ಎಂದರು.
'ಇತರ ಧರ್ಮಗಳನ್ನು ತುಳಿಯಲಾಗುತ್ತಿದೆ. ಮೊದಲು ಮುಸ್ಲಿಮರು, ಬಳಿಕ ಕ್ರೈಸ್ತರನ್ನು ಗುರಿ ಮಾಡಲಾಯಿತು. ನಂತರ ಇತರರನ್ನು ಗುರಿ ಮಾಡಬಹುದು. ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಜೈನರು ಹಾಗೂ ಪಾರ್ಸಿಗಳು ಅರ್ಥ ಮಾಡಿಕೊಳ್ಳಬೇಕು' ಎಂದು ಆರೋಪಿಸಿದರು.

