ನವದೆಹಲಿ: ನೀಟ್ ಸೇರಿ ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ 'ವಿದ್ಯಾರ್ಥಿಗಳ ಪ್ರತಿಧ್ವನಿ' ಹೆಸರಿನಲ್ಲಿ ದೇಶವ್ಯಾಪಿ 40 ದಿನಗಳ ಆಂದೋಲವನ್ನು ಜೂನ್ 30ರಿಂದ ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ವಿದ್ಯಾರ್ಥಿಗಳಿಂದ ಪ್ರತಿಕ್ರಿಯನ್ನೂ ಪಡೆದುಕೊಳ್ಳಲಾಗುವುದು ಎಂದು ಪಕ್ಷ ಹೇಳಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸದ ಗೌರವ್ ಗೊಗೊಯ್, 'ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ಸಾಂಸ್ಥಿಕವಾಗಿರುವ ವೈಫಲ್ಯ' ಇದೆ ಎನ್ನುವುದಕ್ಕೆ ವಿವಿಧ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಿರುವುದೇ ಸಾಕ್ಷಿ. ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿರುವುದರ ಹಿಂದೆ ಯಾವುದೋ ಒಬ್ಬ ವ್ಯಕ್ತಿಯ ತಪ್ಪು ಇಲ್ಲ ಎನ್ನುವುದು ವಿದ್ಯಾರ್ಥಿಗಳಿಗೆ ಅರ್ಥವಾಗಿದೆ' ಎಂದರು.

