ಬದಿಯಡ್ಕ: ನಿವೃತ್ತ ಶಿಕ್ಷಕ, ವಾಗ್ಮಿ ಬನರಿ ನಾರಾಯಣ ಭಟ್ಟ ಅಭಿನಂದನ ಗ್ರಂಥ ಲೋಕಾರ್ಪಣ ಸಮಾರಂಭ 'ಬನಾ ಯಾನ'ಜುಲೈ5ರಂದು ಬೆಳಗ್ಗೆ 9.30ರಿಂದ ಬದಿಯಡ್ಕ ಪೆರಡಾಲ ಶ್ರೀ ಉದನೇಶ್ವರ ದೇವಾಲಯ ಸಭಾಂಗಣದಲ್ಲಿ ಜರುಗಲಿದೆ.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಮರಂಭ ಉದ್ಘಾಟಿಸಿ ಆಶೀರ್ವಚನ ನೀಡುವರು. ಇದೇ ಸಂದರ್ಭ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಮೂರು ದಶಕಗಳ ಕಾಲ ವಿಜ್ಞಾನ, ಆಂಗ್ಲಭಾಷಾ ಅಧ್ಯಾಪಕರಾಗಿದ್ದು ತನ್ನ ಶ್ರೇಷ್ಠ ಅಧ್ಯಾಪನ, ಪ್ರೀತಿ ವಿಶ್ವಾಸಗಳಿಂದ ವಿದ್ಯಾನುರಾಗದ ಮನಗೆದ್ದಿರುವು ಪ್ರಸಕ್ತ 83ರ ಹರೆಯದ ಬನರಿ ನಾರಾಯಣ ಭಟ್ಟ ಅವರ ಜೀವಮಾನದ ಸಾಧನೆಗಳ ಮಾಹಿತಿಗಳಿಂದ ಕೂಡಿದ ಅಭಿನಂದನಾ ಗ್ರಂಥ'ಸುಧಾಂಶು' ಲೋಕಾರ್ಪಣೆ ನಡೆಯುವುದು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಪ್ರಾಂಶುಪಾಲ ಡಾ. ಮಹಮ್ಮದಾಲಿ ಕೆ ಅಧ್ಯಕ್ಷತೆ ವಹಿಸುವರು. ಕುಲಪುರೋಹಿತ ವೇದಮೂರ್ತಿ ಶಿವಶಂಕರ ಭಟ್ ಶುಭನುಡಿ ಸಲ್ಲಿಸುವರು. ಬನರಿ ನಾರಾಯಣ ಭಟ್ ಅವರಿಗೆ ಅಭಿನಂದನೆ ನಡೆಯುವುದು. ನಿವೃತ್ತ ಮುಖ್ಯ ಶಿಕ್ಷಕ ಕಜಂಪಾಡಿ ರಾಮಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬಳ್ಳಂಬೆಟ್ಟು ಈಶ್ವರ ಭಟ್, ಡಾ. ಜಯದೇವ ಕಂಗಿಲ, ವಕೀಲ ವೆಂಕಟ್ರಮಣ ಭಟ್ ಚಂಬಲ್ತಿಮಾರ್, ವಿನಯ್ ಬನರಿ, ಶ್ರೀಯಾ ಬನರಿ, ಇಂಚರ ಬನರಿ ಉಪಸ್ಥಿತರಿರುವರು. ಉದಯಕೃಷ್ಣ ಜಿ. ಗ್ರಂಥಾವಲೋಕನ ನಡೆಸುವರು.

