ಅಯೋಧ್ಯೆ: ರಾಮ ಮಂದಿರಕ್ಕೆ ಬಂದಿರುವ ದೇಣಿಗೆ ಹಾಗೂ ಅದರ ವೆಚ್ಚದ ವಿವರಗಳಲ್ಲಿ ಪಾರದರ್ಶಕತೆ ಕಾಪಾಡುವಂತೆ ಆಗ್ರಹಿಸಿ ರಾಷ್ಟ್ರೀಯ ಜನತಾ ದಳದ (RJD) ಸಂಸದ ಸುಧಾಕರ್ ಸಿಂಗ್ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಟ್ರಸ್ಟಿಗಳಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಸುಪ್ರೀಂ ಕೋರ್ಟ್ ವಕೀಲ ಸತ್ಯಂ ಸಿಂಗ್ ರಜಪೂತ್ ಅವರ ಮೂಲಕ ಕಳುಹಿಸಲಾದ ಈ ನೋಟಿಸ್ ನಲ್ಲಿ ಟ್ರಸ್ಟ್ ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್, ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಅವರನ್ನು ಉಲ್ಲೇಖಿಸಲಾಗಿದೆ.
2021-22ನೇ ಹಣಕಾಸು ವರ್ಷದಿಂದ 2025-26ನೇ ಹಣಕಾಸು ವರ್ಷದವರೆಗೆ ಸ್ವೀಕರಿಸಲಾದ ದೇಣಿಗೆಗಳು ಮತ್ತು ವೆಚ್ಚಗಳ ಸಂಪೂರ್ಣ, ವಸ್ತುಗಳು ಹಾಗೂ ವರ್ಷವಾರು ಲೆಕ್ಕಪತ್ರಗಳನ್ನು ನೋಟಿಸ್ ಸ್ವೀಕರಿಸಿದ ಮೂರು ದಿನಗಳೊಳಗೆ ಬಹಿರಂಗಪಡಿಸುವಂತೆ ನೋಟಿಸ್ ನಲ್ಲಿ ಒತ್ತಾಯಿಸಲಾಗಿದೆ.
ಆಡಿಟ್ ಮಾಡಲಾದ ಬ್ಯಾಲೆನ್ಸ್ ಶೀಟ್ ಗಳು, ಆದಾಯ ಮತ್ತು ವೆಚ್ಚದ ವಿವರಗಳು, ಲೆಕ್ಕಪರಿಶೋಧಕರ ವರದಿಗಳು, ಬ್ಯಾಂಕ್ ಖಾತೆಗಳ ವಿವರಗಳು, ಭೂ ಖರೀದಿ ದಾಖಲೆಗಳು ಹಾಗೂ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ಅಡಿಯಲ್ಲಿ ಸ್ವೀಕರಿಸಲಾದ ಯಾವುದೇ ವಿದೇಶಿ ದೇಣಿಗೆಗಳ ಮಾಹಿತಿಯನ್ನು ಸಾರ್ವಜನಿಕಗೊಳಿಸುವಂತೆ ನೋಟಿಸ್ ನಲ್ಲಿ ಕೋರಲಾಗಿದೆ.
ಅಯೋಧ್ಯೆಯ ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಅವರು ರಾಮ ಮಂದಿರದ ಕಾಣಿಕೆಗಳಲ್ಲಿ 7 ಕೋಟಿ ರೂ.ವಿನಿಂದ 7.5 ಕೋಟಿ ರೂ.ವರೆಗೆ ದುರುಪಯೋಗ ನಡೆದಿದೆ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಈ ಲೀಗಲ್ ನೋಟಿಸ್ ನೀಡಲಾಗಿದೆ. ಆದರೆ, ಈ ಆರೋಪಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಳ್ಳಿಹಾಕಿದ್ದಾರೆ.
ಈ ನಡುವೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಪ್ರಕರಣದ ಕುರಿತು ಉತ್ತರ ಪ್ರದೇಶ ಸರ್ಕಾರದ ಮೌನವನ್ನು ಪ್ರಶ್ನಿಸಿದ್ದು, ಅದು ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ಸಂಬಂಧಿತ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ನ್ಯಾಯಾಂಗವೂ ಈ ವಿಷಯವನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಕೂಡ ಪ್ರಕರಣದ ಬಗ್ಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ರಾಮ ಮಂದಿರದ ಕಾಣಿಕೆಗಳಿಂದ 5 ಕೋಟಿ ರೂ.ಗೂ ಹೆಚ್ಚು ಮೊತ್ತ ಕಳುವಾಗಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಿಸುತ್ತದೆ. ಶ್ರೀರಾಮನಿಗೆ ಭಕ್ತರು ಅರ್ಪಿಸಿದ ಕಾಣಿಕೆಗಳಲ್ಲಿಯೇ ಕಳ್ಳತನ ನಡೆದಿದ್ದರೆ, ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರಗಳು ಅದಕ್ಕೆ ಜವಾಬ್ದಾರಿಯಾಗುತ್ತವೆ. ನೀವು EVMಗಳು, ಮತಗಳು ಮತ್ತು ಸ್ಥಾನಗಳನ್ನು ಕದಿಯುವುದಷ್ಟೇ ಅಲ್ಲ, ಶ್ರೀರಾಮನಿಗೆ ಅರ್ಪಿಸಲಾದ ಕಾಣಿಕೆಗಳನ್ನೂ ಕದಿಯುತ್ತಿದ್ದೀರಿ. ಕಳ್ಳತನವು ನಿಮ್ಮೊಂದಿಗೆ ಎಲ್ಲೆಡೆ ಇದೆ" ಎಂದು ರಾವತ್ ಆರೋಪಿಸಿದ್ದಾರೆ.
ಅದೇ ವೇಳೆ, "ಭಗವಾನ್ ರಾಮ ನಮ್ಮನ್ನು ಮತ್ತೆ ಅಯೋಧ್ಯೆಗೆ ಕರೆಯುತ್ತಿದ್ದಾರೆ ಎಂದು ನಮಗೆ ಅನಿಸುತ್ತಿದೆ. ನಿನ್ನೆ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಿದ್ದೇನೆ. ಅಯೋಧ್ಯೆಗೆ ಭೇಟಿ ನೀಡುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ನಾವು ಮೊದಲು ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆಯುತ್ತೇವೆ. ಅವರ ಮುಂದೆ ತಲೆಬಾಗಿ ಕ್ಷಮೆ ಕೇಳುತ್ತೇವೆ" ಎಂದು ರಾವತ್ ಹೇಳಿದ್ದಾರೆ.

