ದಕ್ಷಿಣ ದೆಹಲಿಯ ಮೌಂಟ್ ಕೈಲಾಸ್‌ನಲ್ಲಿ ಹದಿನೈದು ವರ್ಷದಿಂದ ಮನೆಕೆಲಸ ಮಾಡುತ್ತಿದ್ದ ಮಹಿಳೆಯನ್ನು ಹತ್ಯೆ ಮಾಡಿದ ಆರೋಪದಲ್ಲಿ ವೈದ್ಯನನ್ನು ಬಂಧಿಸಲಾಗಿತ್ತು.
ಮನೆಕೆಲಸದಾಕೆಯನ್ನು ಕೆಲಸದಿಂದ ವಜಾಗೊಳಿಸುವ ಸಂಬಂಧ ಪತ್ನಿಯ ಜತೆ ನಡೆದ ವಾಗ್ವಾದದ ವೇಳೆ ಆರೋಪಿ ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ವೈದ್ಯ ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದ.
ಚರ್ಮರೋಗ ತಜ್ಞನಾಗಿದ್ದ ಆರೋಪಿ ವೈದ್ಯ ಡಾ. ಮನೀಶ್ ಗುಪ್ತಾ ಕಟ್ಟಡದ ಮೆಟ್ಟಿಲಲ್ಲಿ ಕುಳಿತಿದ್ದ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ತನ್ನನ್ನು ಗಲ್ಲಿಗೇರಿಸುವಂತೆ ಕೇಳಿಕೊಂಡಿದ್ದಾನೆ. ಬ್ಯಾಟ್ ಹಾಗೂ ರಕ್ತಸಿಕ್ತ ಚಾಕುವನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.
ಬಂಗಲೆಯ ಟೆರೇಸ್‌ನಲ್ಲಿ ರಕ್ತದ ಮಡುವಿನಲ್ಲಿ ಸಂತ್ರಸ್ತೆ ಮೀನಾ (45) ಬಿದ್ದಿದ್ದನ್ನು ಗಮನಿಸಿದ ಎದುರುಗಡೆ ಅಪಾರ್ಟ್‌ಮೆಂಟ್‌ನವರು ಪೊಲೀಸರಿಗೆ ಮಾಹಿತಿ ನೀಡಿದರು. ಆರೋಪಿ ಹತ್ತು ವರ್ಷಗಳಿಂದ ಖಿನ್ನತೆಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ತನ್ನ ಪತ್ನಿ ಹಾಗೂ ಮಗನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆಯೂ ಆರೋಪಿ ಯೋಚಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಹದಿನೈದು ವರ್ಷದಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ಮೀನಾಳನ್ನು ಕೆಲಸದಿಂದ ತೆಗೆಯುವ ಬಗ್ಗೆ ಪತ್ನಿ ಆಕ್ಷೇಪಿಸಿದ್ದರು. ಪತ್ನಿಯ ಜತೆ ವಾಗ್ವಾದದ ಬಳಿಕ ಆರೋಪಿ, ಮೀನಾಳನ್ನು ಹತ್ಯೆ ಮಾಡಿದ್ದಾಗಿ ಪೊಲೀಸರು ವಿವರಿಸಿದ್ದಾರೆ.

