ಲಖನೌ: ಅಯೋಧ್ಯೆ ರಾಮ ಮಂದಿರದ ದೇಣಿಗೆ ವಿವಾದಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳ ಟೀಕೆಯ ನಡುವೆ ಬಿಜೆಪಿಯ ಮಾಜಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಮತ್ತು ಪ್ರಮುಖ ಹಿಂದೂ ನಾಯಕರೊಬ್ಬರು ಬುಧವಾರ ಆರೋಪಗಳನ್ನು ಮಾಡಿದ್ದಾರೆ.
'ಹಣ ನಾಪತ್ತೆಯಾಗಿರುವುದರ ಹಿಂದೆ ಕೆಲ ಸತ್ಯಗಳಿವೆ.
ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಶೀಘ್ರದಲ್ಲೇ ಜನರ ಮುಂದೆ ಸತ್ಯ ಹೊರಬೀಳಲಿದೆ. ಈಗ ನಡೆಯುತ್ತಿರುವುದು ಸರಿಯಲ್ಲ. ಈಗ ಎದ್ದಿರುವ ಹೊಗೆಯಲ್ಲಿ ಸ್ವಲ್ಪ ಸತ್ಯವಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಗಣಿಸಬೇಕು' ಎಂದು ಬ್ರಿಜ್‌ಭೂಷಣ್ ಆಗ್ರಹಿಸಿದರು.
ರಾಮ ಮಂದಿರ ಹೋರಾಟದಲ್ಲಿ ಭಾಗಿಯಾಗಿದ್ದ, 'ಧರ್ಮಸೇನೆ'ಯ ಅಧ್ಯಕ್ಷ ಸಂತೋಷ್ ದುಬೆ, 'ಭಕ್ತರು ನೀಡಿದ್ದ ಬಂಗಾರ, ಬೆಳ್ಳಿ ಮತ್ತು ಅಷ್ಟಧಾತುವಿನ ನೂರಾರು 'ರಾಮ ಶಿಲೆಗಳು' ನಾಪತ್ತೆಯಾಗಿವೆ' ಎಂದು ಆರೋಪಿಸಿದ್ದಾರೆ.
ಈ ವಿಚಾರವಾಗಿ ರಾಮ ಮಂದಿರ ಟ್ರಸ್ಟ್‌ನ ನಾಲ್ವರು ಹಿರಿಯ ಪದಾಧಿಕಾರಿಗಳ ವಿರುದ್ದ ದುಬೆ ಅವರು ಮಂಗಳವಾರ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ.
ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವ್ಯಾಜ್ಯದಲ್ಲಿ ವಾದಿಯಾಗಿದ್ದ ಮಹಾಂತ್ ಧರ್ಮ ದಾಸ್ ಅವರು ಆರೋಪಗಳ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ರಾಮ ಮಂದಿರಕ್ಕೆ ಬಂದಿರುವ ದೇಣಿಗೆಯ ದುರುಪಯೋಗ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹಣಕಾಸು ನಿರ್ವಹಣೆಯ ಕುರಿತ ಆರೋಪಗಳ ಕುರಿತ ತನಿಖೆಗೆ ಸರ್ಕಾರವು ಜೂನ್ 13ರಂದು ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸಿತ್ತು.
ಹಣ ಎಣಿಕೆ ಮಾಡುವ ಕೆಲ ಸಿಬ್ಬಂದಿಯನ್ನು ಎಸ್‌ಐಟಿ ಬುಧವಾರ ವಿಚಾರಣೆಗೆ ಒಳಪಡಿಸಿದೆ. ಹಣ ನಾಪತ್ತೆ ಪ್ರಕರಣದಲ್ಲಿ ಐವರ ವಿರುದ್ಧ ಶಂಕೆ ವ್ಯಕ್ತವಾಗಿದೆ.

