ಗುರುಗ್ರಾಮ: ಹರ್ಯಾಣದಲ್ಲಿ ಚಿತ್ರೀಕರಿಸಲಾದ ಕಾಮಿಡಿ ಶೋ ಒಂದರಲ್ಲಿ ಆಕ್ಷೇಪಾರ್ಹ ವಿಷಯವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಆರೋಪದಲ್ಲಿ ಕಾಮಿಡಿಯನ್ ಪ್ರಣೀತ್ ಮೋರೆ ಮತ್ತು ಪ್ರೇಕ್ಷಕರಲ್ಲೊಬ್ಬರಾಗಿದ್ದ ಹಿಮಾಂಶು ಜಾಂಗ್ರಾ ವಿರುದ್ಧ ಗುರುಗ್ರಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯವನ್ನು ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ, ಸಾರ್ವಜನಿಕ ಶಾಂತಿ ಕದಡುವಂತಹ ಹೇಳಿಕೆಗಳನ್ನು ನೀಡಿದ ಮತ್ತು ಲೈಂಗಿಕ ಸ್ವರೂಪದ ಹೇಳಿಕೆಗಳ ಮೂಲಕ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಈ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯು ತಿಳಿಸಿದೆ. ಪೋಲಿಸರು ತಮ್ಮ ವೇದಿಕೆಗಳಿಂದ ಈ ವಿಷಯವನ್ನು ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮಗಳನ್ನೂ ವಿನಂತಿಸಿಕೊಂಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮೋರ್ ಮತ್ತು ಜಾಂಗ್ರಾ ವಿರುದ್ಧ ಮಹಾರಾಷ್ಟ್ರ ಪೊಲೀಸರು ಸಹ ಜೂನ್ 11 ರಂದು ಪ್ರಕರಣ ದಾಖಲಿಸಿದ್ದರು.
ಆನ್‌ಲೈನ್‌ನಲ್ಲಿ ವೀಡಿಯೊವೊಂದು ವ್ಯಾಪಕವಾಗಿ ಹಂಚಿಕೆಯಾದ ನಂತರ ಈ ಪ್ರಕರಣಗಳನ್ನು ದಾಖಲಿಸಲಾಗಿದೆ. ವೀಡಿಯೊದಲ್ಲಿ ಜಾಂಗ್ರಾ, ಮಹಿಳೆಯೊಬ್ಬರ ಜೊತೆಗಿನ ಡೇಟ್‌ನಲ್ಲಿ ಬಿರಿಯಾನಿಗಾಗಿ 370 ರೂಪಾಯಿ ಖರ್ಚು ಮಾಡಿದ್ದಕ್ಕೆ ಪ್ರತಿಯಾಗಿ ದೈಹಿಕ ಸಂಪರ್ಕದ ಹಕ್ಕನ್ನು ತಾನು ಹೊಂದಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ ಮಹಿಳೆ ಪದೇ ಪದೇ ಹಿಂಜರಿಕೆ ವ್ಯಕ್ತಪಡಿಸಿದ್ದರೂ ಪಾರ್ಕ್‌ನಲ್ಲಿಯ ಕತ್ತಲೆಯ ಪ್ರದೇಶಕ್ಕೆ ತನ್ನೊಂದಿಗೆ ಬರುವಂತೆ ಆಕೆಯ ಮೇಲೆ ಒತ್ತಡ ಹೇರಿದ್ದಾಗಿಯೂ ಅವರು ವೀಡಿಯೊದಲ್ಲಿ ಹೇಳಿಕೊಂಡಿದ್ದರು.
ಮೋರೆ ಆಯೋಜಿಸಿದ್ದ ಕಾಮಿಡಿ ಶೋನ ಸಂಚಿಕೆಯೊಂದರಲ್ಲಿ ಜಾಂಗ್ರಾ ಪ್ರೇಕ್ಷಕರ ಭಾಗವಾಗಿದ್ದರು. ಈ ಸಂಚಿಕೆಯ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದವು. ಶೋನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಆನ್‌ಲೈನ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದವು.
ಈ ಕಾಮೆಂಟ್‌ಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಜಾಂಗ್ರಾರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗವು, ಲೈಂಗಿಕ ದೌರ್ಜನ್ಯ ಮತ್ತು ಒತ್ತಡವನ್ನು ವೈಭವೀಕರಿಸುವ ಕಾಮೆಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೂ.11ರಂದು ಹರ್ಯಾಣ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿತ್ತು. ಮೋರ್ ಮತ್ತು ಜಾಂಗ್ರಾ ಅವರಿಗೆ ಜೂ.22 ರಂದು ತನ್ನೆದುರು ಹಾಜರಾಗುವಂತೆ ಆಯೋಗವು ಸಮನ್ಸ್ ನೀಡಿದೆ.
ವಿವಾದಿತ ವೀಡಿಯೊಕ್ಕಾಗಿ ಮೋರೆ ಮತ್ತು ಜಾಂಗ್ರಾ ಈಗಾಗಲೇ ಕ್ಷಮೆ ಯಾಚಿಸಿದ್ದಾರೆ.


