ನವದೆಹಲಿ: ಪ್ರಸ್ತಾವಿತ 'ವಿಕಸಿತ ಭಾರತ-ಉದ್ಯೋಗ ಖಾತರಿ ಮತ್ತು ಆಜೀವಿಕ ಯೋಜನೆ-ಗ್ರಾಮೀಣ' (ಗಿಃ-ಉ ಖಂಒ ಉ) ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿರುವ ಹೋರಾಟಗಾರರು ಹಾಗೂ ಕಾರ್ಮಿಕ ಸಂಘಟನೆಗಳು, ಇದರ ವಿರುದ್ಧ ಜುಲೈ 1ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಬುಧವಾರ ಪ್ರಕಟಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನರೇಗಾ ಸಂಘರ್ಷ್ ಮೋರ್ಚಾ, ಕೃಷಿ ಕಾರ್ಮಿಕರ ಒಕ್ಕೂಟ ಹಾಗೂ ಕಾರ್ಮಿಕ ಹಕ್ಕುಗಳ ಸಂಘಟನೆಗಳ ಪ್ರತಿನಿಧಿಗಳು, 'ಪ್ರಸ್ತಾವಿತ ಯೋಜನೆಯಡಿ 125 ದಿನಗಳ ಕಾಲ ಉದ್ಯೋಗ ನೀಡಲಾಗುವುದು ಎಂಬ ಭರವಸೆಗೆ ಆರ್ಥಿಕ ಬೆಂಬಲವಿಲ್ಲ. ಆಡಳಿತಾತ್ಮಕವಾಗಿಯೂ ಅದು ಕಾರ್ಯಸಾಧುವಲ್ಲ ಎಂಬುದನ್ನು ಸರ್ಕಾರaದ ದತ್ತಾಂಶಗಳ ವಿಶ್ಲೇಷಣೆಯೇ ತೋರಿಸುತ್ತಿದೆ' ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕರಡು ನಿಯಮಗಳು, ಯೋಜನೆಯಡಿ ಉದ್ಯೋಗ ಖಾತರಿ ದುರ್ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತವೆ. ಅಲ್ಲದೆ, ಕರಡು ನಿಯಮಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಒಓಖಇಉಂ)ಯನ್ನು ಪರೋಕ್ಷವಾಗಿ ಅಪ್ರಸ್ತುತಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸುತ್ತಿವೆ ಎಂದು ಅವರು ದೂರಿದರು.
ಪ್ರಸ್ತಾವಿತ ಯೋಜನೆಯ ಚೌಕಟ್ಟಿನಲ್ಲಿ ಅಧಿಕಾರವನ್ನು ಕೇಂದ್ರ ಸರ್ಕಾರದ ಮಟ್ಟದಲ್ಲೇ ಕೇಂದ್ರೀಕರಿಸಲಾಗಿದೆ. ಇದರಿಂದ ಗ್ರಾಮೀಣ ಕಾರ್ಮಿಕರಿಗೆ ದೊರೆಯಬೇಕಾದ ಪರಿಣಾಮಕಾರಿ ಉದ್ಯೋಗ ಖಾತರಿ ಕಡಿಮೆಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

