ನವದೆಹಲಿ: 'ಆಧಾರ್ ಕಾರ್ಡ್ ಅನ್ನು ವ್ಯಕ್ತಿಯ ಪೌರತ್ವದ ದಾಖಲೆಯಾಗಿ, ಕಾಯಂ ವಿಳಾಸ ಮತ್ತು ವಾಸದ ವಿಳಾಸ ಖಾತರಿಗಾಗಿ ಬಳಕೆ ಮಾಡಲಾಗುತ್ತಿದೆ. ಆದರೆ, ಇದು ವ್ಯಕ್ತಿಯ ಗುರುತು ಪತ್ತೆಗಾಗಿ ಮಾತ್ರವೇ ಇರುವ ವ್ಯವಸ್ಥೆಯಾಗಿದ್ದು, ಇದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ' ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರ ಪೀಠ ಅರ್ಜಿಯ ವಿಚಾರಣೆ ನಡೆಸಿತು. ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ನಿಖಿಲ್ ಉಪಾಧ್ಯಾಯ ಅವರು ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿ ಕೋರ್ಟ್‌ನಲ್ಲಿ ದಾಖಲಾಗಿದ್ದ ವಿವಿಧ ಅರ್ಜಿಗಳನ್ನೂ ಇದೇ ಪಿಐಎಲ್ ಜೊತೆ ಜೋಡಿಸಿ, ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿತು.
'ಆಧಾರ್ ಎನ್ನುವುದು ಪೌರತ್ವಕ್ಕೆ ದಾಖಲೆಯಾಗಿ ಅಥವಾ ಕಾಯಂ ಮನೆ ವಿಳಾಸ ಮತ್ತು ಈಗಿನ ವಾಸನ ವಿಳಾಸ ಖಾತರಿಗಾಗಿ ಇರುವ ಕಾರ್ಡ್ ಅಲ್ಲ' ಎಂದು 2016ರ ಆಧಾರ್ ಕಾಯ್ದೆಯ 9ನೇ ಸೆಕ್ಷನ್‌ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಕಾನೂನನ್ನು ಉಲ್ಲಂಘಿಸಿ ಆಧಾರ್ ಅನ್ನು ಬಳಸಿಕೊಳ್ಳಾಗುತ್ತಿದೆ. ಮತದಾರರ ಪಟ್ಟಿಗೆ ಹೊಸದಾಗಿ ಸೇರಿಕೊಳ್ಳಲು ನೀಡಲಾಗುವ ಫಾರಂ 6ಕ್ಕೂ ಆಧಾರ್ ಅನ್ನು ಬಳಸಿಕೊಳ್ಳಲಾಗುತ್ತಿದೆ. ದುರ್ಬಳಕೆ ತಡೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
.

