HEALTH TIPS

ಅಮೆರಿಕದ ಗ್ರೀನ್ ಕಾರ್ಡ್ ಭಾರತೀಯರ ಸ್ಥಿತಿ ಅನಿಶ್ಚಿತ

 ವಾಷಿಂಗ್ಟನ್‌: ಅಮೆರಿಕ ಪೌರತ್ವ ಮತ್ತ ವಲಸೆ ಸೇವೆಗಳ ವಿಭಾಗವು (ಯುಎಸ್‌ಸಿಐಎಸ್) ನೀಡಿದ ಒಂದು ಪುಟ್ಟ ಪ್ರಕಟಣೆ ಲಕ್ಷಾಂತರ ಅಮೆರಿಕ ವಾಸಿಗಳಲ್ಲಿ ತಲ್ಲಣ ಉಂಟುಮಾಡಿದೆ. ಎಚ್‌1 ಬಿ ವೀಸಾ ಸೇರಿದಂತೆ ತಾತ್ಕಾಲಿಕ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿದ್ದು, ಗ್ರೀನ್ ಕಾರ್ಡ್ (ಕಾಯಂ ನಿವಾಸಿ ಪ್ರಮಾಣಪತ್ರ) ಪಡೆಯಲು ಅರ್ಜಿ ಸಲ್ಲಿಸಿವವರು ತಮ್ಮ ಮಾತೃದೇಶಗಳಿಗೆ ಹಿಂದಿರುಗಿ, ಅಲ್ಲಿನ ಕಾನ್ಸುಲೇಟ್ ಕಚೇರಿಯ ಮೂಲಕ ಪ್ರಕ್ರಿಯೆ ಮುಂದುವರಿಸಬೇಕು ಎನ್ನುವುದು ಆ ಪ್ರಕಟಣೆಯ ಸಾರ. 


ತಾತ್ಕಾಲಿಕ ವೀಸಾ ಆಧಾರದಲ್ಲಿ ಅಮೆರಿಕದಲ್ಲಿರುವವರು, ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸುತ್ತಿದ್ದು, ಗಂಡ/ಹೆಂಡತಿ, ಮಕ್ಕಳ ಪ್ರಾಯೋಜಕತ್ವದ ಮೂಲಕ ಕಾನೂನುಬದ್ಧ ವಲಸಿಗ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವವರು ಈ ನಿಯಮದ ಅನ್ವಯ ದೇಶ ತೊರೆಯಬೇಕಿದೆ.

ಎಚ್‌-1ಬಿ, ಎಲ್‌-1 ವೀಸಾ ಮತ್ತು ವಿದ್ಯಾರ್ಥಿ ವೀಸಾ ಅಡಿಯಲ್ಲಿ ಅಮೆರಿಕಕ್ಕೆ ಬಂದವರೂ ದೇಶದಲ್ಲಿಯೇ ಉಳಿದುಕೊಂಡು ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತು ಪಡೆಯಲು ಇದುವರೆಗೆ ಅವಕಾಶವಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವೃತ್ತಿಪರರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ವೀಸಾ ಕುರಿತ ವಿಳಂಬ, ಗೊಂದಲ ಇತ್ಯಾದಿ ಇಲ್ಲದಂತೆ ನಿರ್ವಿಘ್ನವಾಗಿ ಕೆಲಸ ಮಾಡಲು ಈ ನಿಯಮವು ಅನುಕೂಲಕರವಾಗಿತ್ತು.

ಅಮೆರಿಕಕ್ಕೆ ಎಚ್‌-1ಬಿ ವೀಸಾ ಅಡಿ ತೆರಳುವವರ ಪೈಕಿ ಭಾರತೀಯರೇ ಹೆಚ್ಚು (ಶೇ 70). ಹೀಗಾಗಿ ಭಾರತೀಯರಲ್ಲಿ ಇದು ಆತಂಕ ಮೂಡಿಸಿದೆ. ತಾತ್ಕಾಲಿಕ ವೀಸಾ ಮೇಲೆ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವವರು, ಕೆಲಸ ಅರಸುತ್ತಿರುವವರು ತಕ್ಷಣವೇ ದೇಶ ತೊರೆಯಬೇಕಾದಂಥ ಪರಿಸ್ಥಿತಿ ಉದ್ಭವಿಸಿತ್ತು. ಆದರೆ, ಮೇ 21ರಂದು ಘೋಷಿಸಿದ್ದ ಈ ನಿಯಮಕ್ಕೆ ಅಮೆರಿಕದವರಿಂದಲೇ ವಿರೋಧ ವ್ಯಕ್ತವಾಗಿದೆ. ಅಮೆರಿಕದ ಪ್ರಗತಿಗೆ ಇದು ಮಾರಕ ಎಂದು ಸಂಘಸಂಸ್ಥೆಗಳು ಟೀಕಿಸಿದವು. ಅದರ ಬೆನ್ನಲ್ಲೇ ಅಮೆರಿಕ ಸರ್ಕಾರವು ಈ ನಿಯಮವನ್ನು ಸಡಿಲಿಸಿದೆ. ಈ ಬಗ್ಗೆ ಯುಎಸ್‌ಸಿಐಎಸ್ ಸ್ಪಷ್ಟೀಕರಣ ನೀಡಿದೆ. 'ಅಮೆರಿಕದಲ್ಲಿ ವೃತ್ತಿಪರರಾಗಿದ್ದು, ಗ್ರೀನ್ ಕಾರ್ಡ್‌ ನಿರೀಕ್ಷೆಯಲ್ಲಿರುವವರೆಲ್ಲರೂ ದೇಶ ತೊರೆಯಬೇಕಾದ ಅಗತ್ಯವೇನಿಲ್ಲ. ತಮ್ಮ ವೃತ್ತಿಯಿಂದ ಅಮೆರಿಕದ ಆರ್ಥಿಕತೆಗೆ ಲಾಭವಾಗುತ್ತಿದೆ ಎಂದು, ತಮ್ಮ ಕೆಲಸ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಸಾಬೀತುಪಡಿಸಿದರೆ, ಅಂಥವರಿಗೆ ಅಮೆರಿಕದಲ್ಲಿಯೇ ಉಳಿಯಲು ಅವಕಾಶ ನೀಡಲಾಗುತ್ತದೆ' ಎಂದು ಸ್ಪಷ್ಟೀಕರಣದಲ್ಲಿ ಹೇಳಲಾಗಿದೆ.

ಯುಎಸ್‌ಸಿಐಎಸ್ ಸ್ಪಷ್ಟೀಕರಣದ ನಂತರವೂ ಹೊಸ ನಿಯಮದ ವಿಚಾರದಲ್ಲಿ ಗೊಂದಲ ಇದೆ. ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾದ ನಂತರ ವಲಸೆ ನೀತಿಯಲ್ಲಿ ಭಾರಿ ಬದಲಾವಣೆಗಳು ಘಟಿಸುತ್ತಿವೆ. 'ಅಮೆರಿಕ ಮೊದಲು' ಎನ್ನುವ ಪ್ರತಿಪಾದನೆಯೊಂದಿಗೆ ವಲಸಿಗರನ್ನು ಶತ್ರುಗಳಂತೆ ನೋಡುವ ಪರಿಪಾಟ ಅಮೆರಿಕದಲ್ಲಿ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ ಹಲವು ವರ್ಷಗಳಿಂದ ನೆಲಸಿ, ಅಲ್ಲಿಯೇ ಮನೆ ನಿರ್ಮಿಸಿಕೊಂಡು, ನೆಲೆ ಕಂಡುಕೊಂಡಿರುವ ಅನೇಕ ಭಾರತೀಯ ಕುಟುಂಬಗಳಲ್ಲಿ ಇದು ಅನಿಶ್ಚಿತತೆ, ಆತಂಕ ಸೃಷ್ಟಿಸಿದೆ.

(ಆಧಾರ: ಯುಎಸ್‌ಸಿಐಎಸ್,ಯುಎಸ್‌ ವೀಸಾ ಸರ್ವಿಸಸ್‌, ಸ್ಟೇಟ್‌ಲೈನ್.ಒಆರ್‌ಜಿ, ವಿದೇಶಾಂಗ ಸಚಿವಾಲಯದ ದತ್ತಾಂಶಗಳು, ಮಾಧ್ಯಮ ವರದಿಗಳು)







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries