HEALTH TIPS

ಪುನಃ ಕ್ಷೇತ್ರ ಮರುವಿಂಗಡಣೆ ಚರ್ಚೆ: 'ಇಂಡಿಯಾ' ಭಿನ್ನಮತದ ಲಾಭ ಪಡೆಯುವುದೇ ಕೇಂದ್ರ?

ನವದೆಹಲಿ: ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು, ಕ್ಷೇತ್ರ ಮರುವಿಂಗಡಣೆ ಪ್ರಸ್ತಾಪವನ್ನು ಸಂಸತ್ತಿನಲ್ಲಿ ಮತ್ತೊಮ್ಮೆ ಮಂಡಿಸುವ ಸಾಧ್ಯತೆ ಇದೆ.

'ಇಂಡಿಯಾ' ಕೂಟದಲ್ಲಿರುವ ಎರಡು ಪಕ್ಷಗಳಲ್ಲಿ ಆಂತರಿಕ ಕಲಹ ಶುರುವಾಗಿದೆ. ಮತ್ತೊಂದು ಪಕ್ಷವು ಮೈತ್ರಿಕೂಟದಿಂದಲೇ ಹೊರನಡೆಯುವುದಾಗಿ ಹೇಳಿದೆ. ಹೀಗಾಗಿ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸರ್ಕಾರದ ನಿಲುವಿಗೆ ಬೆಂಬಲ ಸಿಕ್ಕರೂ ಅಚ್ಚರಿಯಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಲೋಕಸಭಾ ಸ್ಥಾನಗಳ ಸಂಭವನೀಯ ಹೆಚ್ಚಳಕ್ಕೆ ಸಂಬಂಧಿಸಿದ ಕಾನೂನು ರೂಪಿಸುವ ನಿಟ್ಟಿನಲ್ಲಿ ಮುಂದುವರಿಯಲು ಅಗತ್ಯ ರಾಜಕೀಯ ಬೆಂಬಲ ದೊರೆಯಲಿದೆಯೇ ಎಂಬುದರ ಪರಾಮರ್ಶೆ ನಡೆಯುತ್ತಿವೆ ಎನ್ನಲಾಗಿದೆ.

'ಸಂಸತ್ತಿನಲ್ಲಿ ಸದ್ಯದ ಪರಿಸ್ಥಿತಿಯು ಮೊದಲಿಗಿಂತ ಭಿನ್ನವಾಗಿದೆ' ಎಂದು ಮೂಲವೊಂದು ತಿಳಿಸಿರುವುದಾಗಿ ಪಿಟಿಐ ಉಲ್ಲೇಖಿಸಿದೆ.

2023ರಲ್ಲಿ ಅಂಗೀಕಾರಗೊಂಡಿರುವ ಮಹಿಳಾ ಮೀಸಲು ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಪ್ರಾತಿನಿಧ್ಯ ಒದಗಿಸುತ್ತದೆ. ಆದಾಗ್ಯೂ, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಕಾನೂನು ಜಾರಿ ಪ್ರಕ್ರಿಯೆ ಸಾಧ್ಯವಾಗಲಿದೆ.

ಸದ್ಯಕ್ಕೆ ಈ ವಿಚಾರವು ರಾಜಕೀಯವಾಗಿ ಸಂದಿಗ್ಧ ಪರಿಸ್ಥಿತಿ ನಿರ್ಮಾಣ ಮಾಡಿದೆ. ಮುಖ್ಯವಾಗಿ, ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರಗಳ ಮರುವಿಂಗಡಣೆಯಾದರೆ, ಸಂಸತ್ತಿನಲ್ಲಿ ಪ್ರಾತಿನಿಧ್ಯ ಕಳೆದುಕೊಳ್ಳುವ ಬಗ್ಗೆ ದಕ್ಷಿಣದ ರಾಜ್ಯಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.

ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್ವಿಂಗಡಣೆ ಮತ್ತು ಜನಗಣತಿಯೊಂದಿಗೆ ಜೋಡಿಸುವ ಮೂಲಕ ಕೇಂದ್ರ ಸರ್ಕಾರವು ಅದರ (ಮಹಿಳಾ ಮೀಸಲಾತಿ) ಅನುಷ್ಠಾನವನ್ನು ವಿಳಂಬ ಮಾಡುತ್ತಿದೆ ಎಂದು ವಿರೋಧ ಪಕ್ಷಗಳ ಈ ಹಿಂದೆ ಆರೋಪಿಸಿದ್ದವು.

ಆದರೆ, 2029ರ ಸಾರ್ವತ್ರಿಕ ಚುನಾವಣೆ ವೇಳೆಗೆ ಮೀಸಲಾತಿ ಜಾರಿಗೊಳಿಸುವ ಮುನ್ನ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಅನುಸರಿಸಬೇಕಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕೆಲವು ಸಂಸದರು ಹಾಗೂ ಪ್ರಾದೇಶಿಕ ಪಕ್ಷಗಳ ನಾಯಕರು ಹಲವು ವಿಚಾರಗಳಲ್ಲಿ ಎನ್‌ಡಿಎ ಸರ್ಕಾರದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ಹೊತ್ತಿನಲ್ಲಿ, ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯವೂ ಹೆಚ್ಚಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹೀಗಾಗಿ, ಕ್ಷೇತ್ರ ಮರುವಿಂಗಡಣೆ ವಿಚಾರ ಯಾವಾಗ ಮುನ್ನಲೆಗೆ ಬರಲಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಮುಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ಚರ್ಚೆಗೆ ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries